ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ: ಕೆ.ಟಿ. ಶ್ರೀಕಂಠೇಗೌಡ

KannadaprabhaNewsNetwork | Published : May 12, 2024 1:17 AM

ಸಾರಾಂಶ

18 ದಿನಗಳ ಅಹೋರಾತ್ರಿ ಧರಣಿ ಮಾಡಿ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗೆ ಎರಡು ವೇತನ ಬಡ್ತಿ ಕೊಡಿಸಿದ್ದೇನೆ. ಸಹ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸೇವಾ ಬಡ್ತಿ ಕೊಡಿಸಿದ್ದೇನೆ. ಪಿಎಚ್.ಡಿಯೇತರ ಉಪನ್ಯಾಸಕರಿಗೂ ವೇತನ ಹೆಚ್ಚಳಕ್ಕೆ ಶ್ರಮಿಸಿದ್ದೇನೆ. ಶಿಕ್ಷಕರ ನಾಡಿಮಿಡಿತ ಅರಿತಿದ್ದೇನೆ

ಕನ್ನಡಪ್ರಭ ವಾರ್ತೆ ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಮೇ 16 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸುವಂತೆ ವಿಧಾನಪರಿಷತ್ತು ಮಾಜಿ ಸದಸ್ಯರಾದ ಜೆಡಿಎಸ್ ಮುಖಂಡ ಕೆ.ಟಿ. ಶ್ರೀಕಂಠೇಗೌಡ ಮನವಿ ಮಾಡಿದರು.ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ತಮ್ಮ ಬೆಂಬಲಿಗರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾಗ್ಯೂ ನೀವು ಶಿಕ್ಷಕರ ಪರವಾಗಿಯೇ ಹೆಚ್ಚು ಕೆಲಸ ಮಾಡಿದ್ದೀರಿ. ನಿಮ್ಮಂಥವರು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ನಿಮ್ಮ ಅಭಿಪ್ರಾಯದಂತೆ ಸ್ಪರ್ಧೆ ಮಾಡಲಿದ್ದೇನೆ ಎಂದರು.18 ದಿನಗಳ ಅಹೋರಾತ್ರಿ ಧರಣಿ ಮಾಡಿ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗೆ ಎರಡು ವೇತನ ಬಡ್ತಿ ಕೊಡಿಸಿದ್ದೇನೆ. ಸಹ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸೇವಾ ಬಡ್ತಿ ಕೊಡಿಸಿದ್ದೇನೆ. ಪಿಎಚ್.ಡಿಯೇತರ ಉಪನ್ಯಾಸಕರಿಗೂ ವೇತನ ಹೆಚ್ಚಳಕ್ಕೆ ಶ್ರಮಿಸಿದ್ದೇನೆ. ಶಿಕ್ಷಕರ ನಾಡಿಮಿಡಿತ ಅರಿತಿದ್ದೇನೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಒಪಿಎಸ್ ಜಾರಿ, 7ನೇ ವೇತನದ ವರದಿ ಜಾರಿ, 1995ರ ನಂತರದ ಶಿಕ್ಷಣ ಸಂಸ್ಥೆಗಳಿಗೆ ವೇತನ ಅನುದಾನ ವಿಸ್ತರಣೆ, ವಿವಿಗಳಿಗೆ ಉಪನ್ಯಾಸಕರ ಭರ್ತಿ ಸೇರಿದಂತೆ ಶಿಕ್ಷಕರ ಸಮಸ್ಯೆಗಳಿಗೆ ಸದನದ ಒಳಗೂ ಹೊರಗೂ ಧನಿಯಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು. ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜೇ ಅರಸ್, ನಿವೃತ್ತ ಪ್ರಾಂಶುಪಾಲ ಹೊನ್ನಯ್ಯ, ನಿವೃತ್ತ ಬಿಇಒ ಹಾಲತಿ ಸೋಮಶೇಖರ್, ಮುಖಂಡರಾದ ಜವರಯ್ಯ, ಬಂಗಾರ ನಾಯಕ್, ಸೋಮಣ್ಣ, ಉಮೇಶ್, ಹೇಮಾವತಿ, ಹನುಮಂತೇಶ್ ಮೊದಲಾದವರು ಇದ್ದರು.ದಕ್ಷಿಣ ಶಿಕ್ಷಕರ ಕ್ಷೇತ್ರ ಬಿಜೆಪಿ ಪಾಲುವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರು ಶನಿವಾರ ಬೆಳಗ್ಗೆಯಷ್ಟೇ ಬೆಂಬಲಿಗರ ಸಭೆ ನಡೆಸಿ, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೇ 16 ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಸಂಜೆಯ ವೇಳೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರವು ಬಿಜೆಪಿ ಪಾಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಡಾ.ಈ.ಸಿ. ನಿಂಗರಾಜ್‌ ಗೌಡ ಸ್ಪರ್ಧಿಸುವುದು ಅಧಿಕೃತವಾಗಿದೆ.

Share this article