ಧಾರವಾಡ:
ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ತಮ್ಮ ಜಾನಪದ ಸಂಶೋಧನಾ ಕೇಂದ್ರದ ಮೂಲಕ ಶುರು ಮಾಡಿರುವ ಈ ಹಬ್ಬದ ಸಂಭ್ರಮವನ್ನು ಅವರ ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸೋಮವಾರ ಇಲ್ಲಿಯ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಸಂಸ್ಥೆಯ ಹಲವು ಮಹಿಳೆಯರೊಂದಿಗೆ ಅರ್ಥಪೂರ್ಣವಾಗಿ ಸಂಕ್ರಮಣ ಆಚರಿಸಿತು.
ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ಸಂಕ್ರಮಣದ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿಕೊಂಡು ಸಂಕ್ರಾಂತಿ ಹಾಡುಗಳನ್ನು ಹಾಡುತ್ತಾ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದರು. ಎಳ್ಳು ಬೆಲ್ಲ ಸೇರಿದಂತೆ ಸಜ್ಜೆ, ಜೋಳದ ರೊಟ್ಟಿ, ಬದನೆಕಾಯಿ ಬರ್ತಾ, ಮಡಕಿಕಾಳು, ಅವರೆಕಾಳು, ಬದನೆಕಾಯಿ ಎಣ್ಣೆಗಾಯಿ, ಕರಿಹಿಂಡಿ, ಶೇಂಗಾಚೆಟ್ಟಿ, ಗುರೆಳ್ಳ ಚೆಟ್ಟಿ, ಹಿಟ್ಟಿನ ಪಲ್ಲೆ, ಮಾದಲಿ, ಶೇಂಗಾ ಹೋಳಿಗೆ, ಚಿತ್ರನ್ನ, ಮೊಸರನ್ನ, ತರಕಾರಿ ಅಂತಹ ತರಹೇವಾರಿ ಅಡುಗೆ ಹಬ್ಬಕ್ಕೆ ಮತ್ತಷ್ಟು ಕಳೆ ತಂದಿತು.ಕಳೆದ ಹನ್ನೊಂದು ವರ್ಷಗಳಿಂದ ಜಾನಪದ ಸಂಶೋಧನಾ ಸಂಸ್ಥೆಯು ಹಬ್ಬಗಳ ಮಹತ್ವ ತಿಳಿಸುವ ಕಾರ್ಯಕ್ರಮ ಮಾಡುತ್ತಿದೆ. ಸಂಕ್ರಮಣದಲ್ಲಿ ಗಂಗೆ ಪೂಜೆ ಮಾಡಿ ಹಬ್ಬದ ನಿಮಿತ್ತ ಸುಗ್ಗಿ ಹಾಡು, ಮಾದಲಿ ಹಬ್ಬ ಬಂದೈತಿ, ಸಂಕ್ರಾಂತಿ ತಂದೈತಿ ಅಂತಹ ಹಾಡುಗಳನ್ನು ಹಾಡಿ ಮಕ್ಕಳಿಗೆ ಕರೆ ಎರೆದು ಎಲ್ಲರೂ ಕೂಡಿ ಭೋಗಿ ಮಾಡುತ್ತೇವೆ ಎಂದು ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ ಮಾಹಿತಿ ನೀಡಿದರು.
ಈ ಸಮಯದಲ್ಲಿ ಖೈರುನ್ನಿಸಾ, ವಿದ್ಯಾ ದೇಸಾಯಿ, ಆಶಾ ಸೈಯದ್, ಇಂದಿರಾ ಶಶಿಧರ, ರಾಜೇಶ್ವರಿ ಕಟ್ಟಿಮನಿ, ರಾಜೇಶ್ವರ ಕಬ್ಬೂರ, ಪಲ್ಲವಿ ಗಂಗಾ, ನಂದಾ ಗುಳೇದಗುಡ್ಡ, ಸುಜಾತಾ ಹಡಗಲಿ, ಗಿರಿಜಾ ಶಕ್ತಿ, ಅನುಪಮಾ, ಭಾರತಿ ಕಲ್ಮಠ, ವೀಣಾ ಹೊಸಮನಿ, ಸುಮಿತ್ರಾ, ಜಯಶ್ರೀ ಇದ್ದರು.