ತರಬೇತಿ ಕಾರ್ಯಾಗಾರ । ಸಹಾಯಕ ಆಯುಕ್ತ ಸೂಚನೆ । ಎಸ್‌ಸಿ ಒಳಮೀಸಲಾತಿ ಕುರಿತು ಮಾಹಿತಿ
ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಯಾವುದೇ ಲೋಪವಿಲ್ಲದೆ ವ್ಯವಸ್ಥಿತವಾಗಿ ಕೈಗೊಳ್ಳಲು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ನ್ಯಾ.ಡಾ.ಎಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ವರದಿಯ ಹಿನ್ನೆಲೆ ಪರಿಶಿಷ್ಟ ಜಾತಿ ಜನಾಂಗದ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ಸರ್ಕಾರ ನಿರ್ದೇಶಿಸಿದ್ದು, ವ್ಯವಸ್ಥಿತವಾಗಿ ಯಾವುದೇ ಕುಟುಂಬ ಈ ಸಮೀಕ್ಷೆಯಿಂದ ವಂಚಿತರಾಗ ದಂತೆ ಎಚ್ಚರಿಕೆಯೊಂದಿಗೆ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಮೀಕ್ಷೆಯ ಮೇಲ್ವಿಚಾರಣೆಗಾಗಿ, ರಾಜ್ಯ ಮಟ್ಟದಲ್ಲಿ ಸಮಿತಿ ಇದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಇದೆ. ಜಿ.ಪಂ. ಸಿಇಓ ಉಪಾಧ್ಯಕ್ಷರಾಗಿದ್ದಾರೆ. ತಾಲೂಕಾ ಮಟ್ಟದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸಮಿತಿ ಮೇಲ್ವಿಚಾರಣೆ ಮಾಡಲಿದೆ. ಪ್ರತಿ ತಾಲೂಕಿಗೆ ತಲಾ 5 ಮಾಸ್ಟರ್ ಟ್ರೈನರ್ ಆಯ್ಕೆ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ತಹಸೀಲ್ದಾರ್ ಸುರೇಶ್ ಅಂಕಲಗಿ, ಪರಿಶಿಷ್ಟ ಜಾತಿ ಕಲ್ಯಾಣಾಧಿಕಾರಿ ಸಿದ್ದಣ್ಣ, ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರರು ಇದ್ದರು.