ಹಾವೇರಿ: ಹಣ ಪಾವತಿ ಮಾಡಿದರೂ ಆಣೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡದ ಗುತ್ತಿಗೆದಾರರಿಗೆ ನೋಟಿಸ್ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಜಿಪಂ ಸಿಇಒ ರುಚಿ ಬಿಂದಲ್ ಅವರಿಗೆ ಸೂಚಿಸಿದರು.ಸ್ಥಳೀಯ ಜಿಪಂ ಕಚೇರಿಯಲ್ಲಿ ಭಾನುವಾರ ಜಿಲ್ಲೆಯ ಮೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಹಂಸಭಾವಿ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಪಡೆಯುವ ಬಗ್ಗೆ ಚರ್ಚಿಸಲು ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಿಗದಿಪಡಿಸಿ ಎಂದು ಸೂಚನೆ ನೀಡಿದರು.ತಡಸ ಯೋಜನೆಯ ಗುತ್ತಿಗೆದಾರರ ಬಗ್ಗೆ ಸದಭಿಪ್ರಾಯ ಇಲ್ಲ, ಹಲವಾರು ಬಾರಿ ದಂಡ ವಿಧಿಸಲಾಗಿದೆ. ಆದರೂ ಅವರ ವರ್ತನೆ ಬದಲಾಗಿಲ್ಲ. ಯೋಜನಾ ವೆಚ್ಚ ಹೆಚ್ಚಳ ಮಾಡುವುದೇ ಅವರ ಕೆಲಸವಾಗಿದೆ. ಅವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಆಣೂರು ಬಹುಗ್ರಾಮ ಯೋಜನೆ ಫೆಬ್ರವರಿ ೨೦೨೪ಕ್ಕೆ ಅನುಷ್ಠಾನಗೊಳ್ಳಬೇಕಿತ್ತು. ಗಡುವು ಮುಗಿದು ಎರಡು ವರ್ಷ ಕಳೆದರೂ ಇನ್ನೂ ಯೋಜನೆ ಪೂರ್ಣಗೊಳಿಸಿ ಹಸ್ತಾಂತರ ಮಾಡಿಲ್ಲ. ಶೇ.೮೨ರಷ್ಟು ಹಣ ಪಾವತಿ ಆಗಿದೆ. ಅವರಿಗೆ ಪಾವತಿ ಮಾಡಿರುವ ೧೦೪ ಕೋಟಿ ರು. ಗಳಿಗೆ ಎಷ್ಟು ಬಡ್ಡಿ ಆಗುತ್ತದೆ ಗೊತ್ತಿದೆಯಾ? ಜಿಲ್ಲೆಯ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.ಸಭೆಗೆ ಗುತ್ತಿಗೆದಾರರು ಗೈರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು, ಜಂಕ್ಷನ್‌ವಾಲ್‌ಗೆ ಅನುಮೋದನೆ ಪಡೆಯುವುದು ಯಾರ ಜವಾಬ್ದಾರಿ. ಯೋಜನೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾಕೆ ತಪ್ಪು ಮಾಹಿತಿ ನೀಡಿದಿರಿ. ಕೊಟ್ಟ ಮಾತಿನಂತೆ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕಿತ್ತು. ಸಾಮರ್ಥ್ಯ ಇಲ್ಲದಿದ್ದರೆ ಟೆಂಡರ್‌ನಲ್ಲಿ ಭಾಗವಹಿಸಬಾರದು ಎಂದು ಹೇಳಿದರು.ಯೋಜನೆಯ ಅನುಷ್ಠಾನಕ್ಕೆ ಯಾವ ಹಂತದಲ್ಲಿ ಸಮಸ್ಯೆ ಇದೆ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದರೆ ಪರಿಹರಿಸುವ ಪ್ರಯತ್ನ ಮಾಡಬಹುದಿತ್ತು. ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.ಹಂಸಭಾವಿ ಬಹುಗ್ರಾಮ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಅಗತ್ಯ ಇದೆ ಎಂಬ ವಿಷಯವನ್ನು ಇದುವರೆಗೆ ಗಮನಕ್ಕೆ ತಾರದೆ ಯೋಜನೆ ವಿಳಂಬಕ್ಕೆ ಬೇರೆ ಬೇರೆ ಕಾರಣ ನೀಡಲಾಯಿತು. ಇದೀಗ ಸಮಸ್ಯೆ ಹೇಳಲಾಗುತ್ತಿದೆ. ಇದಕ್ಕೆಲ್ಲ ಯಾರು ಜವಾಬ್ದಾರಿ ಎಂದರು.ನಿಯಮ ಉಲ್ಲಂಘನೆ ಕಾರಣಕ್ಕೆ ಅರಣ್ಯ ಇಲಾಖೆಗೆ ಒಂದು ಕೋಟಿ ರು. ದಂಡ ಪಾವತಿ ಮಾಡಬೇಕಾಗಿದೆ ಎಂದು ಜಿಪಂ ಸಿಇಒ ರುಚಿ ಬಿಂದಲ್ ಅವರು ಸಚಿವರ ಗಮನಕ್ಕೆ ತಂದರು. ಅರಣ್ಯ ಇಲಾಖೆ ಕ್ಲಿಯರೆನ್ಸ್ ಪಡೆಯುವ ಬಗ್ಗೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ತ್ವರಿತವಾಗಿ ಸಭೆ ನಿಗದಿಪಡಿಸಿ ಎಂದು ಸೂಚಿಸಿದರು.ಸಭೆಯಲ್ಲಿ ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಿಗೋಡಿ, ಜಿಪಂ ಉಪಕಾರ್ಯದರ್ಶಿ ಡಾ. ಪುನೀತ್ ಇತರ ಅಧಿಕಾರಿಗಳು ಇದ್ದರು.ಗುತ್ತಿಗೆದಾರರ ವಿರುದ್ಧ ಪಿಐಎಲ್..ತಡಸ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಎಚ್ಚರಿಕೆ ನೀಡಿದರು.ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಎಲ್ಲೆಲ್ಲಿ ಎಷ್ಟು ಯೋಜನೆಗಳನ್ನು ತೆಗೆದುಕೊಂಡಿದ್ದೀರಿ ಎಂದು ಗುತ್ತಿಗೆದಾರರನ್ನು ಸಚಿವರು ಪ್ರಶ್ನಿಸಿದರು. ನೂರು ಕೋಟಿ ರು. ಯೋಜನೆಯನ್ನು ಇನ್ನೂರು ಕೋಟಿ ರು. ಮಾಡುವುದು, ಟೆಂಡರ್ ನಿಯಮಗಳನ್ನು ಉಲ್ಲಂಘನೆ ಮಾಡುವುದು ನಿಮ್ಮ ಕಾಯಕವಾಗಿದೆ. ಯಾರು ನಿಮ್ಮ ಗಾಡ್ ಫಾದರ್ ಎಂದು ಖಾರವಾಗಿ ಪ್ರಶ್ನಿಸಿದರು.ಜನರಿಗೆ ನಾವು ಏನು ಉತ್ತರ ಕೊಡಬೇಕು: ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಏಳೆಂಟು ಕೆಡಿಪಿ ಸಭೆಗಳನ್ನು ಮಾಡಿದ್ದೇನೆ. ಪ್ರತಿ ಸಭೆಯಲ್ಲೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಡೆಡ್‌ಲೈನ್ ವಿಸ್ತರಣೆ ಮಾಡಲಾಗಿದೆ. ಆದರೂ ಪೂರ್ಣಗೊಳಿಸುತ್ತಿಲ್ಲ ಎಂದರೆ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.