ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರಾದ ತಹಸೀಲ್ದಾರರಿಗೆ ನೋಟಿಸ್‌ ನೀಡಲು ಸೂಚನೆ

KannadaprabhaNewsNetwork |  
Published : Jul 24, 2025, 01:45 AM IST
ರಾಣಿಬೆನ್ನೂರಿನ ತಾಪಂ ಸಭಾಭವನದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಆರ್. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ಮಾಡುವಾಗ ಅದಕ್ಕೆ ಉತ್ತರ ನೀಡಬೇಕಾದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಾಗಲಿ ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಅರ್. ಕೂಡಲೇ ಗೈರು ಹಾಜರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.

ರಾಣಿಬೆನ್ನೂರು: ಸಭೆಗೆ ಗೈರಾದ ತಹಸೀಲ್ದಾರರಿಗೆ ನೋಟಿಸ್‌ ನೀಡಲು ಸೂಚನೆ, ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ನಿಯಂತ್ರಣಕ್ಕೆ ಕ್ರಮಕ್ಕೆ ಆಗ್ರಹ, ಸಮನ್ವಯದಿಂದ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಲಹೆ.. ಇವೆಲ್ಲ ಬುಧವಾರ ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಅರ್. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯ ಪ್ರಮುಖ ಅಂಶಗಳು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ಮಾಡುವಾಗ ಅದಕ್ಕೆ ಉತ್ತರ ನೀಡಬೇಕಾದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಾಗಲಿ ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜಿಪಂ ಉಪ ಕಾರ್ಯದರ್ಶಿ ಡಾ. ಪುನೀತ್ ಬಿ.ಅರ್. ಕೂಡಲೇ ಗೈರು ಹಾಜರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು. ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. ವಿದೇಶ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಶೇ. 10ರಷ್ಟು ಆಗುವುದಿಲ್ಲ. ಆದರೆ ಇಲ್ಲಿ ಶೇ. 90ರಷ್ಟು ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಯಾವ ಖಾಸಗಿ ಆಸ್ಪತ್ರೆಯವರಿಗೆ ನೋಟಿಸ್ ನೀಡಿದ್ದಿರಿ? ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಇದಲ್ಲದೆ ತಾಲೂಕಿನಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ವರದಿಯಾಗಿರುವ ಕುರಿತು ಉಪ ಕಾರ್ಯದರ್ಶಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟಿಎಚ್‌ಒ ಡಾ. ರಾಜೇಶ್ವರಿ ಕದರಮಂದಡಲಗಿ, ತಾಲೂಕಿನಲ್ಲಿ 18 ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ ಇಬ್ಬರಿಗೆ ಹೆರಿಗೆಯಾಗಿದ್ದು, ಮಕ್ಕಳ ತೂಕ ಕ್ರಮವಾಗಿ 2.1 ಹಾಗೂ 2.3 ಕೆಜಿಯಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಗುಡಗೂರು ಗ್ರಾಮದ ಅಂಗನವಾಡಿ ಕೆಲಸ ಪ್ರಾರಂಭವಾಗದಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಿಡಿಪಿಒ ಇಲಾಖೆ ಅಧಿಕಾರಿ ಹಾಗೂ ಜಿಪಂ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಭಿನ್ನ ಮಾಹಿತಿ ನೀಡಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಉಪ ಕಾರ್ಯದರ್ಶಿಗಳು ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು ಸರಿಯಲ್ಲ. ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಎಷ್ಟು ಕಾಮಗಾರಿಗಳಿಗೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಉಪ ಕಾರ್ಯದರ್ಶಿಗಳು ಬಿಇಒಗೆ ಪ್ರಶ್ನಿಸಿದರು. ಇದರ ಬಗ್ಗೆ ಸರಿಯಾದ ಮಾಹಿತಿಯಿರದ ಬಿಇಒ ಉತ್ತರ ನೀಡಲು ಪರದಾಡಿದರು. ಇದರಿಂದ ಸಿಟ್ಟಿಗೆದ್ದ ಉಪ ಕಾರ್ಯದರ್ಶಿಗಳು, ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡಿ. ಯಾಕೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರಿ ಅಂತ ಬಿಇಒರನ್ನು ತರಾಟೆಗೆ ತೆಗೆದುಕೊಂಡರು. ಅಂಗವಾಡಿಗಳ ಕಟ್ಟಡ ಎಸ್ಟಿಮೇಟ್, ಯಾಕೆ ಮಾಡಿಲ್ಲ ಎಂದು ಡಾ. ಪುನೀತ್ ಪ್ರಶ್ನೆ ಮಾಡಿದರು? ಅದಕ್ಕೆ ಉತ್ತರಿಸಿದ ಅಧಿಕಾರಿಗಳು, ಶಾಸಕರು ಪ್ಲಾನ್ ಚೆಂಜ್ ಮಾಡಬೇಕು ಅಂತ ಹೇಳಿದ್ದಾರೆ ಎಂದರು. ಆದಷ್ಟು ಬೇಗ ಶಾಸಕರ ಗಮನಕ್ಕೆ ತಂದು ಕೆಲಸ ಪ್ರಾರಂಭಿಸುವಂತೆ ಅಧಿಕಾರಿಗೆ ಡಾ. ಪುನೀತ್ ಸೂಚಿಸಿದರು. ತಾಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ನೀಡಿ, ಅಡುಗೆದಾರರ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಅಡುವೆ ಮಾಡುವ ಸಮಯದಲ್ಲಿ ಸಮವಸ್ತ್ರ ಧರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಉಪ ಕಾರ್ಯದರ್ಶಿಗಳು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಸಲಹೆ ನೀಡಿದರು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಉಪ ಕಾರ್ಯದರ್ಶಿ ಮಾತನಾಡಿ, ಕೃಷಿ ಹೊಂಡ ನಿರ್ಮಿಸಿದ ಮೂರ‍್ನಾಲ್ಕು ವರ್ಷಗಳ ನಂತರ ಅವುಗಳನ್ನು ರೈತರು ಮುಚ್ಚಿಬಿಡುತ್ತಿರುವುದು ಕಂಡುಬಂದಿದೆ. ಅವುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಅವರಿಂದ ಮುಚ್ಚಳಿಕೆ ಪತ್ರ ಹಾಗೂ ಬಾಂಡ್ ಬರೆಸಿಕೊಂಡು ಸಬ್ಸಿಡಿ ನೀಡುವಂತೆ ಕೃಷಿ ಅಧಿಕಾರಿಗೆ ತಿಳಿಸಿದರು. ಬಿತ್ತನೆ ಬೀಜದ ಗುಣಮಟ್ಟ ಪರಿಶೀಲನೆ ಯಾವ ರೀತಿ ಕೈಗೊಳ್ಳುವಿರಿ? ಎಂದು ಉಪ ಕಾರ್ಯದರ್ಶಿಗಳು ಕೇಳಿದರು. ಇದಕ್ಕೆ ಉತ್ತರಿಸಿದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ಸರ್ಕಾರದಿಂದ ಪೂರೈಕೆಯಾಗುವ ಬಿತ್ತನೆ ಬೀಜಗಳ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರವೇ ರೈತ ಸಂಪರ್ಕಗಳ ಮೂಲಕ ರೈತರಿಗೆ ವಿತರಿಸಲಾಗುವುದು ಎಂದರು.ತಾಪಂ ಇಒ ಪರಮೇಶ ವೇದಿಕೆಯಲ್ಲಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ