ಕಿರುಹೊಳೆ ಬದಿ ಒತ್ತುವರಿ ತೆರವಿಗೆ ಶಾಸಕ ಪೊನ್ನಣ್ಣ ಸೂಚನೆ

KannadaprabhaNewsNetwork |  
Published : Jun 17, 2024, 01:46 AM IST
ಚಿತ್ರ - 16ಎಂಡಿಕೆ5 : 'ಟ್ರ್ಯಾಸ್ ಬ್ಯಾರಿಕೇಡ್' ಉದ್ಘಾಟನೆ ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ.  | Kannada Prabha

ಸಾರಾಂಶ

ಕಿರುಹೊಳೆ ಸಂರಕ್ಷಿಸುವಲ್ಲಿ ಈ ಹಿಂದೆ ಶ್ರಮಿಸಲಾಗಿತ್ತು. ಆ ನಿಟ್ಟಿನಲ್ಲಿ ಕಿರುಹೊಳೆಯನ್ನು ಹಿಂದಿನಂತೆ ಉಳಿಸಬೇಕು ಎಂದು ಶಾಸಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೋಣಿಕೊಪ್ಪ ಪಟ್ಟಣದಲ್ಲಿನ ಕಿರುಹೊಳೆಯ ಬದಿ ಜಾಗ ಒತ್ತುವರಿ ಆಗಿದ್ದಲ್ಲಿ ಕೂಡಲೇ ತೆರವುಗೊಳಿಸುವ ಕಾರ್ಯಕ್ಕೆ ಮರು ಚಾಲನೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ‘ಟ್ರ್ಯಾಸ್ ಬ್ಯಾರಿಕೇಡ್’ ಉದ್ಘಾಟನೆ ಹಾಗೂ ವನ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಿರುಹೊಳೆ ಸಂರಕ್ಷಿಸುವಲ್ಲಿ ಈ ಹಿಂದೆ ಶ್ರಮಿಸಲಾಗಿತ್ತು, ಆ ನಿಟ್ಟಿನಲ್ಲಿ ಕಿರುಹೊಳೆಯನ್ನು ಹಿಂದಿನಂತೆ ಉಳಿಸಬೇಕು. ಈ ಕಾರ್ಯಕ್ಕೆ ಮರು ಚಾಲನೆ ನೀಡಬೇಕು ಎಂದು ಶಾಸಕರು ತಿಳಿಸಿದರು.

ನದಿ, ತೊರೆ, ಹಳ್ಳಕೊಳ್ಳ ಹಾಗೂ ಜಲಾಶಯವನ್ನು ನಾಶ ಮಾಡಿ ಅಭಿವೃದ್ಧಿ ಮಾಡಬೇಕಿಲ್ಲ, ಅರಣ್ಯ, ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಿ, ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದರು.

ಕಿರುಹೊಳೆಯಲ್ಲಿ ಟ್ರ್ಯಾಸ್ ಬ್ಯಾರಿಕೇಡ್ ಅಳವಡಿಸಿರುವುದರಿಂದ ಘನ ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಿದೆ. ಇದೊಂದು ರೀತಿಯ ಸಣ್ಣ ಪ್ರಯೋಗ ಎಂದರೆ ತಪ್ಪಾಗದು ಎಂದು ಹೇಳಿದರು.

ಮನೆ, ವಿದ್ಯುತ್, ಕುಡಿಯುವ ನೀರು ಮತ್ತಿತರ ಸೌಲಭ್ಯಕ್ಕಾಗಿ ಮನವಿಗಳು ಬರುತ್ತವೆ, ಆದರೆ ಸ್ವಚ್ಛತಾ ಕಾರ್ಯಕ್ಕೆ ಮನವಿ ಮಾಡುವುದು ಕಡಿಮೆ, ಆ ದಿಸೆಯಲ್ಲಿ ‘ಕ್ಲೀನ್‌ ಕೂರ್ಗ್’ ತಂಡದವರು ಕಿರುಹೊಳೆ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಪರಿಸರ ಸಂರಕ್ಷಿಸುವಲ್ಲಿ ಸರ್ಕಾರದ ಜತೆ ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನದಿ, ತೊರೆ, ಹಳ್ಳಕೊಳ್ಳಗಳನ್ನು ಉಳಿಸಬೇಕು. ವ್ಯಾಪಾರ, ವಾಣಿಜ್ಯ, ಉದ್ಯಮ ನಡೆಸುವವರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸ್ವಚ್ಛ, ಸುಂದರ ಕೊಡಗು ಕಾಣಲು ಸಾಧ್ಯ ಎಂದರು.

ಕ್ಲೀನ್ ಕೂರ್ಗ್‌ನ ಪವನ್ ಅಯ್ಯಪ್ಪ ಮಾತನಾಡಿ, ತಾತ, ಮುತ್ತಾತಂದಿರು ನಮಗಾಗಿ ನದಿ, ತೊರೆ, ಜಲಾಶಯವನ್ನು ಉಳಿಸಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಮಾತನಾಡಿ, ಯಾವುದೇ ನದಿ, ತೊರೆ, ಹಳ್ಳ ಕೊಳ್ಳಗಳಲ್ಲಿ ಜಲಚರಗಳು ಚೆನ್ನಾಗಿದ್ದರೆ ನೀರು ಶುದ್ಧವಾಗಿದೆ ಎಂದು ಅರ್ಥ. ಪರಿಸರ ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಗಿಡಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷರಾದ ಮಂಜುಳಾ, ತಹಸೀಲ್ದಾರರಾದ ಮೋಹನ್ ಕುಮಾರ್, ಬಿ.ಎನ್.ಪ್ರಕಾಶ್, ಪಿಡಿಒ ತಿಮ್ಮಯ್ಯ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಂಕರಪುರ ಕ್ಷೇತ್ರ: 31ರಿಂದ ಮುಖ್ಯಪ್ರಾಣ ಶಿಲಾಮೂರ್ತಿ ಬ್ರಹ್ಮಕಲಶೋತ್ಸವ
ಡಾ ಮಂತರ್ ಪ್ರಯತ್ನ: ಕೊಡವ ಹೆರಿಟೇಜ್ ಸೆಂಟರ್ ಶೀಘ್ರ ಲೋಕಾರ್ಪಣೆ