ಹಾವೇರಿ: ಚೌಡಯ್ಯದಾನಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಅಭಿವೃದ್ಧಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಗಂಗಾಮತ ಸಮಾಜದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರನ್ನು ಆಹ್ವಾನಿಸದಿರುವುದು ಸಮಾಜಕ್ಕೆ ಮಾಡಿದ ಅಪಮಾನ ಎಂದು ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಹೇಳಿದರು.
ಚೌಡಯ್ಯನವರ ಐಕ್ಯ ಮಂಟಪ ಅಭಿವೃದ್ಧಿ ವಿಚಾರದಲ್ಲಿ ಚಂದ್ರಶೇಖರ ಒಡೆಯರ್ ಅವರು ಸಾಕಷ್ಟು ಗೊಂದಲ ಸೃಷ್ಟಿಸಿದ್ದಾರೆ. ಈ ಹಿಂದೆ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹಾಗೂ ಸಮಾಜದ ಮುಖಂಡರ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ. ಇಂತಹ ವ್ಯಕ್ತಿಯನ್ನು ಸಮಾಜದ ಪ್ರತಿನಿಧಿಯಂತೆ ಸಭೆಗೆ ಆಹ್ವಾನಿಸಿರುವುದು ಸರಿಯಲ್ಲ. ಅವರು ಗಂಗಾಮತ ಸಮಾಜದ ಮುಖಂಡರಲ್ಲ ಎಂದು ಆಕ್ಷೇಪಿಸಿದರು.
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮಾಜ ಒಗ್ಗಟ್ಟಾಗಿದೆ. ಐಕ್ಯ ಮಂಟಪ ಅಭಿವೃದ್ಧಿ ಕಾರ್ಯಗಳು ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಪೀಠಾಧ್ಯಕ್ಷರನ್ನು ಹೊರಗಿಟ್ಟು ಸಭೆ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಗುರುಗಳ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಐಕ್ಯ ಮಂಟಪ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಅನುಮಾನವೂ ಇದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಸಮಾಜದ ಹಿತಾಸಕ್ತಿಯನ್ನು ಕಡೆಗಣಿಸಿ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನ. 5ರಂದು ಐಕ್ಯ ಮಂಟಪದ ಕುರಿತು ಸಭೆ ನಡೆಸಲಾಗಿತ್ತು. ನ. 30ರಂದು ಸಮಾಜದ ವತಿಯಿಂದ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಭೆ ನಡೆಸಿರುವುದು ಸರಿಯಲ್ಲ ಎಂದರು.
2028ರಲ್ಲಿಯೂ ಇದೇ ಪ್ರಕ್ರಿಯೆ ಮುಂದುವರಿಸಿದರೆ ರಾಣಿಬೆನ್ನೂರು ಮತ್ತು ಹಾವೇರಿ ಶಾಸಕರಿಗೆ ಸಮಾಜದ ಬೆಂಬಲ ಇರುವುದಿಲ್ಲ. ಅವರನ್ನು ಮನೆಗೆ ಕಳುಹಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮ್ಮಕನೂರ ಅವರು ಜಿಲ್ಲೆಗೆ ಬಂದಾಗ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.