ಡಂಬಳ: ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿ ಕರ್ತವ್ಯ ಲೋಪ ಮಾಡಿರುವ ಮೇವುಂಡಿ ಗ್ರಾಪಂ ಪಿಡಿಓ ಸಂತೋಷ ಹೂಗಾರ ಅವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಲಕ್ಷ್ಮಣ ತಗಡಿನಮನಿ ಆಗ್ರಹಿಸಿದ್ದಾರೆ.
ಮೇವುಂಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಸ್ಥಳದಲ್ಲಿ ಪ್ರತಿಭಟನೆ ಕೈಗೊಂಡು ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಸ್ಥಳೀಯ ಗ್ರಾಪಂ ಸರ್ಕಾರದ ಬ್ಯಾನರ್‌ನಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಭಾವಚಿತ್ರ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಂಟಿಸಿದ್ದರು.ನೀತಿ ಸಂಹಿತಿ ಜಾರಿ ಹಿನ್ನೆಲೆ ಗ್ರಾಪಂ ಅಧಿಕಾರಿಗಳು ಬಸವಣ್ಣನವರ ಭಾವಚಿತ್ರಕ್ಕೆ ಯಾವುದೇ ಹಾನಿ ಮಾಡದೇ ಕೇವಲ ಅಂಬೇಡ್ಕರ ಅವರನ್ನು ಗುರಿಯಾಗಿಟ್ಟುಕೊಂಡು ಉದ್ದೇಶ ಪೂರ್ವಕವಾಗಿ ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಖಂಡನೀಯ. ಈ ಕೂಡಲೆ ಕರ್ತವ್ಯ ಲೋಪ ಎಸಗಿರುವ ಪಿಡಿಓ ಸಂತೋಷ ಹೂಗಾರ ಅವರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಧನಂಜಯ ಮಾಲಗಿತ್ತಿ, ಅಂಬೇಡ್ಕರ ಭಾವಚಿತ್ರಕ್ಕೆ ಯಾರೇ ಅಪಮಾನ ಮಾಡಿದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಗ್ರಾಮದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳದೆ ಸಾರ್ವಜನಿಕರು ಶಾಂತಿ ಸೌಹಾರ್ದತೆಗೆ ಆದ್ಯತೆ ನೀಡಬೇಕು.ಕರ್ತವ್ಯ ಲೋಪ ಮಾಡಿರುವ ಪಿಡಿಓ ಸಂತೋಷ ಹೂಗಾರ ಅವರಿಗೆ ಕಾರಣ ಕೇಳಿ ತಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನೋಟಿಸ್ ನೀಡಲಾಗುವುದು. ಪರಿಶೀಲನೆ ಮಾಡಿ ತಪ್ಪು ಮಾಡಿದವರ ಮೇಲೆ ಸೂಕ್ತ ಕಾನೂನು ಕೈಗೊಳ್ಳುವ ಭರವಸೆ ನೀಡಿದ್ದರಿಂದ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಇಓ ಮಂಜುನಾಥ ಹೊಸಮನಿ,ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉದಯಕುಮಾರ ಯಲಿವಾಳ, ಸೋಮಣ್ಣ ಹೈತಾಪುರ, ನಿಂಗಪ್ಪ ಪೆದ್ದರ, ಮಾರುತಿ ಮ್ಯಾಗೇರಿ, ನಿಂಗರಾಜ ವಡ್ಡಟ್ಟಿ, ಚನ್ನಪ್ಪ ಹೊಸಮನಿ, ಪ್ರವೀಣ ವಡ್ಡಟ್ಟಿ, ಸತ್ಯಪ್ಪ ಹೈತಾಪೂರ, ಮೈಲೆಪ್ಪ ವಡ್ಡಟ್ಟಿ, ಮಹಾದೇವಪ್ಪ ಹಿರೇಮನಿ, ಮಲ್ಲಪ್ಪ ಹಿರೇಮನಿ, ಸುರೇಶ ತಳಕಲ್, ಹಾಲಪ್ಪ ತಾಂಬ್ರಗುಂಡಿ, ರವಿಕುಮಾರ ಹಿರೇಮನಿ, ಫಕ್ಕೀರೇಶ ಹೈತಾಪೂರ, ದುರಗಪ್ಪ ಆಲೂರ, ಕೊಟೇಶ ವಡ್ಡಟ್ಟಿ, ಮಂಜುನಾಥ ಹೈತಾಪೂರ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ, ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಯುವಕರು ಇದ್ದರು.