ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಬಸವಾಭಿಮಾನಿಗಳು, ಬಸವಣ್ಣನವರನ್ನು ಅವಮಾನಿಸಿದ ಲೇಖಕ ಹಾಗೂ ಪುಸ್ತಕ ಪ್ರಕಟಿಸಿದ ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಲೇಖಕ ರವಿ ಹಂಜ್ ವಿರುದ್ಧ ಘೋಷಣೆಗಳನ್ನು ಕೂಗಿ, ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, 12ನೇ ಶತಮಾನದಲ್ಲಿ ವರ್ಣಭೇದ, ಲಿಂಗಭೇದಗಳನ್ನು ತೊಡೆದುಹಾಕಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರು ನಾಡಿನ ಶ್ರೇಷ್ಠ ದಾರ್ಶನಿಕರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಕುರಿತು ಅವಹೇಳನಕಾರಿ ಹಾಗೂ ವಿವಾದಾತ್ಮಕ ಬರಹಗಳನ್ನು ಪ್ರಕಟಿಸಿರುವುದು ಖಂಡನೀಯ ಎಂದರು.ರಾಜ್ಯ ಸರ್ಕಾರ ವಿವಾದಾತ್ಮಕ ಬಸವ ಮಂಟಪ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಪುಸ್ತಕದ ಮಾರಾಟ ಮತ್ತು ಪ್ರಸಾರವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಲೇಖಕ ಹಾಗೂ ಪ್ರಕಾಶಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಶಿವರುದ್ರ ಗೋಳಪ್ಪನವರ, ಅರುಣ ಬಾಷಿಂಗೆ, ಸಂಗನಗೌಡ ಪಾಟೀಲ, ಅನಂತ ಬಸರಿಕೋಡಿ, ರಾಮನಗೌಡ ಪಾಟೀಲ, ನ್ಯಾಯವಾದಿ ಅಮೋಘ ಕೊಬ್ಬರಿ, ಧರೆಪ್ಪ ಟಕ್ಕಣ್ಣವರ, ಪ್ರಕಾಶ ಮಹಾಜನ, ಮನೋಹರ ಹಂಜಿ, ಪ್ರಶಾಂತ ತೋಡಕರ, ಶಶಿಧರ ಬರ್ಲಿ, ಅಣ್ಣಾಸಾಬ ತೆಲಸಂಗ, ವಿಜಯ ನೇಮಗೌಡ, ಶ್ರೀಶೈಲ ನಾಯಕ, ರಮೇಶ ಕಾಗಲೇ, ಶಿವಾನಂದ ಹುನ್ನೂರ, ಆಕಾಶ ನಂದಗಾವ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.