ಬ್ರಾಹ್ಮಣ ಸಿಇಟಿ ಅಭ್ಯರ್ಥಿಗೆ ಅಪಮಾನ: ಹವ್ಯಕ ಮಹಾಸಭಾ ಖಂಡನೆ

KannadaprabhaNewsNetwork |  
Published : Apr 19, 2025, 12:30 AM IST
೩೨ | Kannada Prabha

ಸಾರಾಂಶ

ಶಿವಮೊಗ್ಗ, ಬೀದರ್ ಸೇರಿದಂತೆ ಕೆಲವಾರು ಸಿ.ಇ.ಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತುಂಡರಿಸಿರುವ ಆಘಾತಕಾರಿ ಘಟನೆಗಳು ವರದಿಯಾಗಿದ್ದು ಈ ಬೆಳವಣಿಗೆಯನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ ಖಂಡಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಶಿವಮೊಗ್ಗ, ಬೀದರ್ ಸೇರಿದಂತೆ ಕೆಲವಾರು ಸಿ.ಇ.ಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತುಂಡರಿಸಿರುವ ಆಘಾತಕಾರಿ ಘಟನೆಗಳು ವರದಿಯಾಗಿದ್ದು ಈ ಬೆಳವಣಿಗೆಯನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ ಖಂಡಿಸಿದೆ.

ಬ್ರಹ್ಮೋಪದೇಶದ ಸಮಯದಲ್ಲಿ ಜನಿವಾರ ಧರಿಸಿ, ಗಾಯತ್ರೀ ಮಂತ್ರೋಪದೇಶ ಪಡೆಯುವುದು ಬ್ರಾಹ್ಮಣ ಹಕ್ಕು ಹಾಗೂ ಕರ್ತವ್ಯವಾಗಿದೆ. ಜನಿವಾರಕ್ಕೆ ಧಾರ್ಮಿಕ ಮಹತ್ವವಿದ್ದು, ಪರಮಪವಿತ್ರ ಜನಿವಾರವನ್ನು ಸಿ.ಇ.ಟಿ ಕೇಂದ್ರಗಳಲ್ಲಿ ತುಂಡರಿಸಿರುವುದು ಆತಂಕಕಾರಿಯಾಗಿದ್ದು, ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕು ಮೊಟಕುಗೊಳಿಸುವ ಕೃತ್ಯವಾಗಿದೆ ಎಂದು ಮಹಾಸಭಾ ಅಧ್ಯಕ್ಷ ಗಿರಿಧರ್‌ ಕಜೆ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ಪ್ರಕರಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತು ಸರ್ಕಾರದಿಂದ ಯಾವುದಾದರೂ ಸೂಚನೆಗಳಿದ್ದಲ್ಲಿ ಅದನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಮಹಾಸಭಾ ಆಗ್ರಹಿಸಿದೆ.

ಜಾತಿ ಸಮೀಕ್ಷೆ ಅವೈಜ್ಞಾನಿಕ:

ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ಕುರಿತಾಗಿ ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಪ್ರಕಟವಾಗುತ್ತಿದ್ದು, ವರದಿಯ ಪ್ರಕಾರ ಹವ್ಯಕ ಬ್ರಾಹ್ಮಣರ ಜನಸಂಖ್ಯೆ ಕೇವಲ 85 ಸಾವಿರ ಎಂದು ಮಾಧ್ಯಮಗಳ ಮೂಲಕ ಮಹಾಸಭೆಯ ಗಮನಕ್ಕೆ ಬಂದಿದೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆ ಈ ಅವೈಜ್ಞಾನಿಕ ವರದಿ ತಿರಸ್ಕರಿಸುವಂತೆ ಮಹಾಸಭಾ ಆಗ್ರಹಿಸಿದೆ.

ಹವ್ಯಕ ಬ್ರಾಹ್ಮಣರು ರಾಜ್ಯದ ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಪ್ರಬಲ ಸಮಾಜವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದನ್ನೂ ನಾವು ಗಮನಿಸಬಹುದಾಗಿದ್ದು, ಹವ್ಯಕ ಸಮಾಜದ ಜನಸಂಖ್ಯೆ ಸುಮಾರು 5 ಲಕ್ಷಕ್ಕೂ ಅಧಿಕವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆಯನ್ನು ಖಂಡಿಸಿದ್ದು, ಅವೈಜ್ಞಾನಿಕ ಸಮೀಕ್ಷೆ ತಿರಸ್ಕರಿಸುವಂತೆ ಹವ್ಯಕ ಮಹಾಸಭಾ ಆಗ್ರಹಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ