ಕನ್ನಡಪ್ರಭ ವಾರ್ತೆ ಬೆಳಗಾವಿ
ಮಚ್ಛೆ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ರಾಯಣ್ಣನ ಪ್ರತಿಮೆ ಸ್ಥಾಪಿಸಿದ್ದು, ಪ್ರತಿಮೆ ಮೇಲೆ ಆಯಿಲ್ ತರಹದ ದ್ರವ ಪದಾರ್ಥ ಸುರಿಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮರದಿಂದ ಹನಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಗಿಡದ ಸುತ್ತಮುತ್ತ ಎಲ್ಲಿಯೂ ದ್ರವ ಬಿದ್ದಿಲ್ಲ, ಪ್ರತಿಮೆ ಮೇಲಷ್ಟೆ ಹಾಗೂ ರಸ್ತೆಯ ಮೇಲೂ ಕೆಲವೆಡೆ ಬಿದ್ದಿದೆ. ಮೂರ್ತಿ ಮರದ ಕೆಳಗಡೆಯಿಲ್ಲ. ಮೂರ್ತಿಯ ಮುಂದೆ ನಿಂತು ಯಾರೋ ಕಿಡಿಗೇಡಿಗಳು ಎಸೆದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಜಿಲೇಬಿ ಪಾಕ್ ತರಹದ ಅಂಟಿನ ಪದಾರ್ಥ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆ ಬಗ್ಗೆ ಪ್ರಕರಣ ದಾಖಲು
ಘಟನೆ ನಡೆದ ಸ್ಥಳದ ಸಮೀಪವೇ 10 ಮೀಟರ್ ದೂರದಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಶೋಧ ಮುಂದುವರಿದಿದೆ. ದೂರುದಾರರನ್ನು ವಿಚಾರಣೆಗೊಳಪಡಿಸಿದ್ದು, ಎಲ್ಲಾ ಆಯಾಮಗಳಲ್ಲೂ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೂರ್ತಿಗೆ ಹಾಕಿರುವುದು ಮಸಿ ಅಲ್ಲ, ಅಂಟಿನಂತಹ ದ್ರಾವಣವಾಗಿರಬಹುದು ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ. ಆದರೆ, ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಸ್ಪಷ್ಟತೆ ಸಿಗಲಿದೆ. ಸದ್ಯ ಸ್ಥಳದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.