ಬಳ್ಳಾರಿ: ರಾಜ್ಯಸಭೆಯ ಸಭಾಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಮಿಮಿಕ್ರಿ ಮಾಡಿ ಅವಮಾನಿಸಿದ ತ್ರಮಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸಂಸದರ ವರ್ತನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿಯವರನ್ನು ಸಂಸತ್ ಆವರಣದಲ್ಲಿಯೇ ಅಣುಕ ಮಾಡಿ, ಅವಮಾನಿಸಿರುವ ಕಾಂಗ್ರೆಸ್ ಸಂಸದರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಲೇವಡಿ ಮಾಡಿದ್ದಾರೆ. ಇದು ಕಾಂಗ್ರೆಸ್‌ನ ಪೈಶಾಚಿಕ ಮನಸ್ಥಿತಿಯನ್ನು ತೋರಿಸುತ್ತದೆಯೇ ವಿನಃ ಸಂಸದರ ಸ್ಥಾನಕ್ಕೆ ಗೌರವ ತಂದುಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಉಪ ರಾಷ್ಟ್ರಪತಿ ಅವರನ್ನು ಓರ್ವ ಸಂಸದ ಅಣುಕ ಮಾಡುತ್ತಿದ್ದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅದನ್ನು ವೀಡಿಯೋ ಮಾಡಿದ್ದಾರೆ. ಮಿಮಿಕ್ರಿಯನ್ನು ಸಮರ್ಥಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್‌ನ ಸಂಸದ ಕಲ್ಯಾಣ ಬ್ಯಾನರ್ಜಿ ಹೇಳಿಕೆ ಅತ್ಯಂತ ನಾಚಿಕೆಗೇಡು. ಈ ಘಟನೆಯನ್ನು ಖಂಡಿಸಬೇಕಾದ ಕಾಂಗ್ರೆಸ್ ನಾಯಕರು, ಅಣುಕ ಮಾಡಿದ ಸಂಸದನ ಪರ ಮಾತನಾಡುತ್ತಿದ್ದು, ಈ ಬೆಳವಣಿಗೆಯನ್ನು ಇಡೀ ದೇಶವೇ ನೋಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್ ನಾಯಕರ ನಡೆಗಳಿಗೆ ಸರಿಯಾದ ಉತ್ತರ ಕೊಡಲಿದ್ದಾರೆ ಎಂದರು.ನಗರದ ಗಡಗಿಚನ್ನಪ್ಪ ವೃತ್ತದ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಉಪರಾಷ್ಟ್ರಪತಿಗಳ ಅಣುಕ ಮಾಡಿದ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳು ಹಾಗೂ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಪಕ್ಷದ ಜಿಲ್ಲಾ ಪ್ರಮುಖರಾದ ಗಾಳಿ ಶಂಕ್ರಪ್ಪ, ಶಿವಶಂಕರ್ ರೆಡ್ಡಿ, ತಿಮ್ಮನಗೌಡ, ಪಾಲಿಕೆಯ ಸದಸ್ಯರಾದ ಮಲ್ಲನಗೌಡ, ಇಬ್ರಾಹಿಂ ಬಾಬು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಗೌಡ, ಪ್ರಧಾನ ಕಾರ್ಯದರ್ಶಿ ಮದಿರೆ ಕುಮಾರಸ್ವಾಮಿ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಗಾದಿಲಿಂಗನಗೌಡ, ಕೆ.ಬಿ. ವೆಂಕಟೇಶ್ವರ, ರಾಮಾಂಜಿನಿ, ರಾಂ ಪ್ರಸಾದ್ ಹಾಗೂ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.