ಹುಬ್ಬಳ್ಳಿ: ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ಸಿನವರು ಟಾರ್ಗೆಟ್ ಕೊಟ್ಟಿದ್ದಾರೆ. ವಾರದಲ್ಲಿ 3 ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಾಗೂ 2 ಸಲ ನನ್ನನ್ನು (ಜೋಶಿ) ಬೈಯಬೇಕು ಅಂತಾ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಧಾರವಾಡ ಕ್ಷೇತ್ರದ ಪ್ರಚಾರ ಕಾರ್ಯಾಲಯವನ್ನು ಉದ್ಘಾಟಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.ಪ್ರಧಾನಿ ಮತ್ತು ನನ್ನನ್ನು ಬೈದರೆ ಮಾತ್ರ ಅವರ ಸಚಿವಗಿರಿ ಉಳಿಯುತ್ತದೆ. ಇಲ್ಲದಿದ್ದಲ್ಲಿ ಇಲ್ಲ. ಇದನ್ನು ಅವರ ಪಕ್ಷದವರೇ ನಮಗೆ ಹೇಳಿದ್ದಾರೆ. ಅದು ಅವರ ರೋಜಿ ರೋಟಿ ಕಾ ಸವಾಲ್ ಆಗಿದೆ. ಹೀಗಾಗಿ ಬೈಯುತ್ತಾರೆ. ಲಾಡ್ ಮಾತಲ್ಲಿ ಏನಾದರೂ ಗಂಭೀರತೆ ಇದೆಯೇ ಎಲ್ಲವೂ ಬಾಲೀಶ ಹೇಳಿಕೆಗಳೇ? ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಟೀಕಿಸಿದರು.
ಆರ್‌ಎಸ್ಎಸ್ ಬ್ಯಾನ್ಸರ್ದಾರ್ ಪಟೇಲರು ಮೊದಲು ಆರ್‌ಎಸ್ಎಸ್ ಬ್ಯಾನ್ ಮಾಡಿದ್ದರು. ಸತ್ಯ ಗೊತ್ತಾದಾಗ ನಿಷೇಧವನ್ನು ಹಿಂಪಡೆದರು. ಗೋವಾ ಮತ್ತು ಹೈದರಾಬಾದ್ ಪ್ರಾಂತ್ಯಗಳ ವಿಮೋಚನೆಗೆ ಸೈನ್ಯ ಕಳುಹಿಸಲು ನೆಹರು ಒಪ್ಪಿದ್ದಿಲ್ಲ. ಆದರೆ, ಸರ್ದಾರ್ ಪಟೇಲರು ಸೈನ್ಯ ತೆಗೆದುಕೊಂಡು ಹೋಗಿ ವಿಮೋಚನೆ ಮಾಡಿದರು. ಪಟೇಲರು ಗುಜರಾತ್‌ನವರು ಎನ್ನುವ ಕಾರಣಕ್ಕೆ ದೊಡ್ಡ ಪ್ರತಿಮೆ ಮಾಡಲಾಗಿದೆ. ಆದರೆ, ಲಾಡ್ ಪ್ರತಿಯೊಂದು ವಿಷಯದಲ್ಲೂ ಪಾಲಿಸಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದರು.
ತುಮಕೂರು ಟಿಕೆಟ್ ವಿಚಾರದಲ್ಲಿ ನನ್ನ ಜೊತೆ ಮಾಜಿ ಸಚಿವರಾದ ವಿ. ಸೋಮಣ್ಣ ಮತ್ತು ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿದ್ದು, ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ವಿಶ್ವಾಸದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಮಾಡುವ ತೀರ್ಮಾನಕ್ಕೆ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ. ಬಹಳ ಜನ ಆಕಾಂಕ್ಷಿಗಳಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.ವಿಜಯ ದಾಖಲಿಸುತ್ತೆ
ಅತ್ಯಂತ ಖುಷಿಯಿಂದ ಇಂದು ಲೋಕಸಭಾ ಚುನಾವಣೆಯ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ್ದೇನೆ. ಬಿಜೆಪಿ ಕಚೇರಿಯನ್ನೇ ಚುನಾವಣೆ ಕಚೇರಿಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದೇವೆ. ನಮ್ಮ ಹೊಸ ಕಚೇರಿ ರೆಡಿಯಾಗಿದೆ. ಈ ಕಾರ್ಯಾಲಯದಿಂದ ಪ್ರಚಾರ ಆರಂಭಿಸಿದವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆಯನ್ನೂ ಇದೇ ಕಚೇರಿಯಿಂದ ಮಾಡಲು ತೀರ್ಮಾನಿಸಿದ್ದೇನೆ ಎಂದರು.ಬಿಜೆಪಿ ಹೊಸ ಕಚೇರಿ ಪೂರ್ಣವಾಗಿದೆ. ಶೀಘ್ರದಲ್ಲೇ ಉದ್ಘಾಟಿಸುತ್ತೇವೆ. 29ಕ್ಕೆ ಪೂಜೆ ನೆರವೇರಿಸುತ್ತೇವೆ. ಮುಂದೆ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮಯ ನೋಡಿಕೊಂಡು ಕಾರ್ಯಕ್ರಮ ಮಾಡುತ್ತೇವೆ. ಅಲ್ಲಿ ವರೆಗೂ ಇದೇ ಕಚೇರಿಯಲ್ಲಿ ಕಾರ್ಯ ನಡೆಯಲಿದೆ ಎಂದು ನುಡಿದರು.
ಈ ವೇಳೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಎಂ. ನಾಗರಾಜ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು.ಶೆಟ್ಟರ ಗೈರು:
ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗೈರಾಗಿದ್ದರು. ಈ ಬಗ್ಗೆ ಕೇಳಿದ್ದಕ್ಕೆ ಜೋಶಿ ಅವರು, ಶೆಟ್ಟರ ಗೈರಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಈ ಕುರಿತು ಮೂರು ದಿನ ಮುಂಚೆಯೇ ಹೇಳಲಾಗಿತ್ತು. ಆದರೆ, ಅನ್ಯ ಕಾರ್ಯದ ಹಿನ್ನೆಲೆ ಶೆಟ್ಟರ ಬೆಂಗಳೂರಿಗೆ ಹೋಗಿದ್ದಾರೆ. ಮುಂದಿನ ಕಾರ್ಯಕ್ರಮಗಳಲ್ಲಿ ಅವರು ಖಂಡಿತ ಪಾಲ್ಗೊಳ್ಳುತ್ತಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಎಂದು ಸ್ಪಷ್ಟಪಡಿಸಿದರು. ಒಂದು ವಾರದೊಳಗಾಗಿ ಶೆಟ್ಟರ್ ಬೆಂಬಲಿಗರ ಸೇರ್ಪಡೆಯಾಗುತ್ತದೆ. ಅದರ ನಂತರ ಎಲ್ಲವೂ ಸರಿಹೋಗುತ್ತೆ. ಜಗದೀಶ ಶೆಟ್ಟರ ಇತ್ತೀಚಿಗಷ್ಟೇ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.