ವಿಮಾ ಕ್ಲೇಮ್‌ ನಿರಾಕರಿಸಿದ ವಿಮಾ ಕಂಪನಿಗೆ ದಂಡ, ಪರಿಹಾರಕ್ಕೆ ಆದೇಶ

KannadaprabhaNewsNetwork |  
Published : Aug 27, 2025, 01:01 AM IST
ಆದೇಶ. | Kannada Prabha

ಸಾರಾಂಶ

ಮಾತು ತಪ್ಪಿದ ವಿಮಾ ಕಂಪನಿಯೊಂದಕ್ಕೆ ಬಡ್ಡಿ ಸಮೇತ ₹ 15 ಲಕ್ಷ ಪರಿಹಾರ ನೀಡಲು ಇಲ್ಲಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ಮಾಡಿದೆ.

ಧಾರವಾಡ: ಮಾತು ತಪ್ಪಿದ ವಿಮಾ ಕಂಪನಿಯೊಂದಕ್ಕೆ ಬಡ್ಡಿ ಸಮೇತ ₹ 15 ಲಕ್ಷ ಪರಿಹಾರ ನೀಡಲು ಇಲ್ಲಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ಮಾಡಿದೆ.

ಹುಬ್ಬಳ್ಳಿಯ ಮಂಟೂರಿನ ಅಮೀನಾ ಬಾಗೆ ಅವರ ಪುತ್ರ ದಿ. ರಫೀಕ್ ಬಾಗೆ ಪಿ.ಎನ್.ಬಿ. ಮೆಟ್‌ಲೈಫ್‌ ಇನ್ಸೂರೆನ್ಸ್ ಕಂಪನಿಯಲ್ಲಿ ಪಾಲಿಸಿ ಮಾಡಿಸಿದ್ದರು. ಪಾಲಿಸಿಯು ಚಾಲ್ತಿಯಲ್ಲಿರುವಾಗಲೇ ರಫೀಕ್ ತಮ್ಮ ಮನೆಯಲ್ಲಿ ಮರಣ ಹೊಂದಿದ್ದರು. ಮಗನ ಸಾವಿನ ನಂತರ ಅಮೀನಾ ಇನ್ಸುರೆನ್ಸ್‌ ಕಂಪನಿ ಸಂಪರ್ಕಿಸಿ, ಪಾಲಿಸಿ ನಿಯಮದಂತೆ ₹14,11,986 ಕೊಡುವಂತೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದರು. ಆದರೆ, ಮೃತರಾದ ರಫೀಕ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಲಿವರ್ ಕಾಯಿಲೆ ಇರುವುದನ್ನು ಮುಚ್ಚಿಟ್ಟಿದ್ದರು ಎಂದು ಹೇಳಿ ಇನ್ಸುರೆನ್ಸ್ ಕಂಪನಿ ಕ್ಲೇಮ್‌ ಕೊಡಲು ನಿರಾಕರಿಸಿತ್ತು.

ವಿಮಾ ಕಂಪನಿಯ ನಡುವಳಿಕೆ ಸೇವಾ ನ್ಯೂನತೆ ಎಂದು ಅಮೀನಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸದರಿ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಮೃತ ರಫೀಕ್ ಮದ್ಯವ್ಯಸನಿ ಮತ್ತು ಲಿವರ್ ಹಾನಿಯಾಗಿರುವ ಬಗ್ಗೆ ವೈದ್ಯಕೀಯ ಚಿಕಿತ್ಸೆ ಪಡೆದಿರುವ ಯಾವುದೇ ದಾಖಲೆಗಳು ಆತ ಪರೀಕ್ಷೆಗೆ ಒಳಗಾದ ಆಸ್ಪತ್ರೆಗಳಲ್ಲಿ ಇಲ್ಲ. ವಿಮಾ ಕಂಪನಿ ಕ್ಲೇಮ್‌ ನಿರಾಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ. ಈ ಅಂಶ ಗಮನಿಸಿದ ಆಯೋಗ, ಸುಳ್ಳು ಕಾರಣಗಳನ್ನು ನೀಡಿ ದೂರುದಾರರ ಕ್ಲೇಮ್‌ ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಎಂದು ತೀರ್ಪು ನೀಡಿದೆ. ಅಮೀನಾ ಮಗನ ವಿಮಾ ಮೊತ್ತ ₹14,11,986 ನ್ನು ಶೇ. 9ರ ಬಡ್ಡಿ ಲೆಕ್ಕ ಹಾಕಿ ಕ್ಲೇಮ್‌ನ್ನು ನಿರಾಕರಿಸಿದ ದಿನದಿಂದ ಆದೇಶವಾದ ಒಂದು ತಿಂಗಳ ಒಳಗಾಗಿ ಕೊಡುವಂತೆ ಪಿ.ಎನ್.ಬಿ ಮೆಟ್‌ಲೈಪ್ ಇನ್ಸೂರೆನ್ಸ್ ಕಂಪನಿಗೆ ಆಯೋಗ ಆದೇಶಿಸಿದೆ. ಅಲ್ಲದೇ, ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ₹50 ಸಾವಿರ ಪರಿಹಾರ ಮತ್ತು ₹10 ಸಾವಿರ ಪ್ರಕರಣದ ಖರ್ಚು, ವೆಚ್ಚ ಕೊಡುವಂತೆ ಆಯೋಗ ವಿಮಾ ಕಂಪನಿಗೆ ನಿರ್ದೇಶಿಸಿದೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?