ಬೆಳೆ ವಿಮೆ ಪರಿಹಾರ ಪರಿಶೀಲಿಸಿ ಪರಿಷ್ಕರಣೆಗೆ ಪ್ರಭು ಒತ್ತಾಯ

KannadaprabhaNewsNetwork |  
Published : Oct 04, 2026, 02:45 AM IST
ಪ್ರಭಾಕರ ಪ್ರಭು | Kannada Prabha

ಸಾರಾಂಶ

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಕರಾವಳಿ ಭಾಗದ ಅಡಕೆ ಬೆಳೆಗಾರರಿಗೆ ಅತ್ಯಂತ ಕಡಿಮೆ ಪ್ರಮಾಣದ ವಿಮೆ ಪರಿಹಾರ ಬಿಡುಗಡೆಯಾಗಿದ್ದು, ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.

ಬಂಟ್ವಾಳ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಕರಾವಳಿ ಭಾಗದ ಅಡಕೆ ಬೆಳೆಗಾರರಿಗೆ ಅತ್ಯಂತ ಕಡಿಮೆ ಪ್ರಮಾಣದ ವಿಮೆ ಪರಿಹಾರ ಬಿಡುಗಡೆಯಾಗಿದ್ದು, ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕುಗಳು ಕಡಿಮೆ ಮಳೆ ಹಾಗೂ ವಿಪರೀತ ತಾಪಮಾನ ಸೇರಿದಂತೆ ಹವಾಮಾನ ವೈಪರೀತ್ಯದ ಕಾರಣದಿಂದ ಬರಪೀಡಿತ ತಾಲೂಕುಗಳೆಂದು ಸರಕಾರದಿಂದ ಘೋಷಿಸಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಪ್ರಮಾಣದ ಬೆಳೆ ವಿಮೆ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿ ಅನೇಕ ಅಡಿಕೆ ಬೆಳೆಗಾರರು ವಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಆದರೆ ಇದೀಗ ಬಿಡುಗಡೆಯಾಗಿರುವ ಅತ್ಯಲ್ಪ ಪರಿಹಾರ ರೈತರಲ್ಲಿ ನಿರಾಸೆ ಮೂಡಿಸಿದೆ. ರೈತರ ಪಾಲು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಪಾಲು ಸೇರಿದಂತೆ ಒಂದು ಎಕರೆಗೆ ಸುಮಾರು ₹18,000ರಷ್ಟು ವಿಮಾ ಮೊತ್ತ ವಿಮಾ ಕಂಪೆನಿಗೆ ಸಂದಾಯವಾಗುತ್ತದೆ. ಆದರೆ ರೈತರಿಗೆ ಬಿಡುಗಡೆಯಾಗುತ್ತಿರುವ ಪರಿಹಾರ ಮೊತ್ತ ಅತ್ಯಲ್ಪವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ತಿಳಿಸಿದ್ದಾರೆ. ತಾಲೂಕಿನ ರಾಯಿ ಹಾಗೂ ಕೊಯಿಲ ಗ್ರಾಮಗಳಿಗೆ ಸಂಬಂಧಿಸಿದಂತೆ ಒಂದು ಎಕರೆಗೆ ಕೇವಲ ₹87 ಪರಿಹಾರ ಬಿಡುಗಡೆಯಾಗಿರುವುದು ಗಮನಾರ್ಹವಾಗಿದೆ. ಹವಾಮಾನ ಪರಿಸ್ಥಿತಿ ಹಾಗೂ ಬೆಳೆ ನಷ್ಟಕ್ಕೆ ಸಂಬಂಧಿಸಿದ ಮಾನದಂಡಗಳ ಆಧಾರದ ಮೇಲೆ ನಡೆದ ಸಮೀಕ್ಷೆಯೇ ಸರಿಯಾಗಿದೆಯೇ ಎಂಬ ಅನುಮಾನವನ್ನು ಇದು ಮೂಡಿಸುತ್ತಿದೆ ಎಂದು ಪ್ರಭಾಕರ ಪ್ರಭು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯಪ್ರವೇಶಿಸಿ, ವಿಮಾ ಕಂಪೆನಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ನಡೆದ ಸಮೀಕ್ಷೆ, ಪರಿಹಾರ ನಿಗದಿ ಹಾಗೂ ಬಿಡುಗಡೆಯ ಪ್ರಕ್ರಿಯೆಯನ್ನು ಮರುಪರಿಶೀಲಿಸಿ, ನ್ಯಾಯಯುತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಭವಿಷ್ಯಕ್ಕೆ ಪ್ರಕೃತಿ ಸಂರಕ್ಷಣೆ ಅಗತ್ಯ: ಬಾಗಡೆ
ಶವ ಹೂತಿಟ್ಟ ಪ್ರಕರಣ: ಧರ್ಮಸ್ಥಳ ಪರ ವಾದ ಮಂಡನೆ