ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಗುಂಡಾಲ್ ಜಲಾಶಯ ಸುತ್ತಮುತ್ತಲಿನ ಅರಣ್ಯ ಪ್ರದೇಶ ಸೇರಿದಂತೆ ಸೋಲಾರ್ ಪ್ಲಾಂಟ್ ಇನ್ನಿತರ ಕಡೆ ರೇಡಿಯೋ ಕಾಲರ್ ಅಳವಡಿಸಿರುವ ಚಿರತೆ ಸೆರೆಗಾಗಿ ಚಿರತೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಕಾರ್ಯಚರಣೆಯನ್ನು ಹಮ್ಮಿಕೊಂಡಿದ್ದಾರೆ.ಸಾಕು ಪ್ರಾಣಿಗಳ ಭಕ್ಷಕ ಚಿರತೆ: ಈಗಾಗಲೇ ಗುಂಡಾಲ್ ಜಲಾಶಯ ಸೇರಿದಂತೆ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಇದ್ದಂತ ಮೇಕೆ ಮತ್ತು ಕೋಳಿಗಳನ್ನು ತಿಂದಿರುವ ಚಿರತೆಯನ್ನು ಸೆರೆ ಹಿಡಿಯಲು ಕಳೆದ 11 ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಪ್ರಯತ್ನದೊಂದಿಗೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಎಸಿಎಫ್ ಭೇಟಿ ಪರಿಶೀಲನೆ: ಚಿರತೆಯನ್ನು ಸರಿ ಹಿಡಿಯಲು ಅದರ ಚಲನವಲನ ಪತ್ತೆಗೆ 35ಕ್ಕೂ ಹೆಚ್ಚು ಕಡೆ ಕ್ಯಾಮರಾ ಟ್ರಾಪ್ ಅಳವಡಿಸಲಾಗಿದೆ. ಜೊತೆಗೆ ಫೈಬರ್ ಗೇಜ್ ಹಾಗೂ ತುಮಕೂರು ಗೇಜ್ ಪಂಜರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಡುವ ಸ್ಥಳದಲ್ಲಿ ಎರಡು ಕಡೆ ಇಡಲಾಗಿದೆ. ಚಿರತೆ ಕಾರ್ಯಪಡೆ ಕಾರ್ಯವೈಖರಿಯ ಬಗ್ಗೆ ಎಸಿಎಫ್ ನಂದಗೋಪಾಲ್ ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ವರ್ಗದವರು ಎಚ್ಚರಿಕೆಯಿಂದ ಕಾರ್ಯಾಚರಣೆ ವೇಳೆ ಇರಬೇಕು. ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಗುಂಡಾಲ್ ಜಲಾಶಯ ಸುತ್ತಮುತ್ತ ಹಾಗೂ ಸೋಲಾರ್ ಪ್ಲಾಂಟ್ ನ ಆಸುಪಾಸಿನಲ್ಲೇ ಓಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿದ್ದಾರೆ.ಐದಾರು ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ: ಪದೇ ಪದೇ ಗುಂಡಾಲ್ ಜಲಾಶಯದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಳೆದ ನಾಲ್ಕು ದಿನಗಳಿಂದ ಗುಂಡಾಲ್ ಜಲಾಶಯದ ಬಳಿ ಬರುವ ಸೋಲಾರ್ ಪ್ಲಾಂಟ್ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶ ಸೇರಿದಂತೆ ರೈತರ ಜಮೀನುಗಳ ಬಳಿ ಓಡಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಚಿರತೆ ಕಾರ್ಯಪಡೆ ಸತತವಾಗಿ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿರತೆ ಸೆರೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.