ಧಾರವಾಡ: ಟನ್ ಕಬ್ಬಿಗೆ ₹5500 ಬೆಲೆ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೀಡಿದ್ದ ಕರ್ನಾಟಕ ಬಂದ್ ಬಿಸಿ ಧಾರವಾಡಕ್ಕೂ ತಟ್ಟಿತು. ಶನಿವಾರ ರೈತರುಗಳು ಪ್ರತ್ಯೇಕವಾಗಿ ಬೇರೆ ಬೇರೆ ಕಡೆಗಳಲ್ಲಿ ರಸ್ತೆ ಬಂದ್ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಧಾರವಾಡದ ಸಂಚಾರದ ಮುಖ್ಯ ಕೇಂದ್ರವಾಗಿರುವ ಜ್ಯುಬಿಲಿ ವೃತ್ತಬಂದ್ ಮಾಡಿ ಮಾನವ ಸರಪಳಿ ಮಾಡಲಾಯಿತು. ಹೀಗಾಗಿ ನಗರ ಹಾಗೂ ಗ್ರಾಮೀಣ ಬಸ್, ಬಿಆರ್‌ಟಿಎಸ್ ಸಂಚಾರ ಮಧ್ಯಾಹ್ನ ವರೆಗೂ ಸ್ತಬ್ದವಾಗಿತ್ತು. ಬಂದ್ ಮಾಹಿತಿ ಇಲ್ಲದೇ ನಗರಕ್ಕೆ ಬಂದಿದ್ದ ಜನರು ಬಸ್ ಸಂಚಾರವಿಲ್ಲದೇ ತೀವ್ರ ಪರದಾಡಿದರು. ಜ್ಯುಬಿಲಿ ವೃತ್ತ ಬಂದ್ ಇದ್ದಿದ್ದರಿಂದ ಸಾಧ್ಯವಿದ್ದ ಬೇರೆ ಮಾರ್ಗಗಳ ಮೂಲಕ ಸಂಚಾರ ವ್ಯವಸ್ಥೆ ಮಾಡಲಾಗಿ ಟ್ರಾಫಿಕ್ ಜಾಮ್ ಆಗಿ ಜನರು ತೀವ್ರ ಸಮಸ್ಯೆ ಎದುರಿಸಬೇಕಾಯಿತು. ತಲೆ ಮೇಲೆ ತಮ್ಮ ವಸ್ತುಗಳನ್ನು ಹೊತ್ತು ಬಸ್ ಇದ್ದಕಡೆ ಜನರು ಓಡುತ್ತಿದ್ದರು.
ನಿಷೇಧಾಜ್ಞೆ ಜಾರಿ:ಶನಿವಾರ ಮಧ್ಯಾಹ್ನವೇ ಶಾಲೆ-ಕಾಲೇಜು ಬಿಡುವು ನೀಡಿದ್ದರಿಂದ ತಮ್ಮ ಊರುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದರು. ಧಾರವಾಡದಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿತು. ಜ್ಯುಬಿಲಿ ವೃತ್ತದ ಬಳಿಯ ಅಂಗಡಿ ಬಂದ್ ಮಾಡಲಾಯಿತು. ಉಳಿದಂತೆ ವ್ಯಾಪಾರ-ವಹಿವಾಟು ಸಾಮಾನ್ಯವಾಗಿತ್ತು. ಮಧ್ಯಾಹ್ನ ವರೆಗೂ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ನಂತರ ಪೊಲೀಸರ ಒತ್ತಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಬೇಕಾಯಿತು. ಈ ಮಧ್ಯೆ ಎಲ್ಲಿಯೂ ಗದ್ದಲ-ಗೊಂದಲ ಸೃಷ್ಟಿಯಾಗಬಾರದು ಎಂದು ಜಿಲ್ಲಾಧಿಕಾರಿಗಳು ಐದು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಸಹ ಹೊರಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯದಯಂತೆ ಎಚ್ಚರ ವಹಿಸಲಾಯಿತು. ನಗರ ವ್ಯಾಪ್ತಿಯಲ್ಲಿ ಪೊಲೀಸ ಆಯುಕ್ತರು ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಪೊಲೀಸ ವರಿಷ್ಠಾಧಿಕಾರಗಳು ಪ್ರತಿಭಟನೆ ನಿರ್ವಹಿಸಿದರು.ಪ್ರಾಮಾಣಿಕ ಬೇಡಿಕೆಗಳಿಗೆ ರೈತರು ಹಲವು ವರ್ಷಗಳಿಂದ ಪ್ರತಿಭಟಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮೋಸ ಮಾಡುತ್ತಲೇ ಬರುತ್ತಿವೆ. ಆದ್ದರಿಂದ ಆಡಳಿತ ವ್ಯವಸ್ಥೆ ವಿರುದ್ಧ ರೈತರು ಪ್ರತಿಭಟಿಸುವುದು ಸಾಮಾನ್ಯ. ಅದು ಅವರ ಹಕ್ಕು ಕೂಡಾ. ಆದರೆ, ಸರ್ಕಾರಗಳು ರೈತರ ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ನಿಷೇದಾಜ್ಞೆ ಹೊರಡಿಸುವ ಅಗತ್ಯ ಇತ್ತಾ ಎಂದು ಪ್ರಶ್ನಿಸಿದ ಮನಸೂರು ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು, ರೈತರ ಹೋರಾಟಕ್ಕೆ ಮಠಾಧೀಶರ ಬೆಂಬಲವೂ ಇದೆ ಎಂದು ಘೋಷಿಸಿದರು. ಧಾರವಾಡ ಗ್ರಾಮೀಣ, ಕಲಘಟಗಿ, ಅಳ್ನಾವರ ಭಾಗದ ರೈತರು ಪ್ರತಿಭಟನೆಯಲ್ಲಿದ್ದರು.