ಅಂತರ್‌ ಗ್ರಾಮ ಹಾಕಿ: ಬಲ್ಲಮಾವಟಿ ತಂಡಕ್ಕೆ ಪ್ರಶಸ್ತಿ

KannadaprabhaNewsNetwork |  
Published : Nov 04, 2024, 12:30 AM IST
32 | Kannada Prabha

ಸಾರಾಂಶ

ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿ ತಂಡವು ಯುವಕಪಾಡಿ ತಂಡದ ವಿರುದ್ಧ ಜಯಗಳಿಸಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿ ತಂಡವು ಯವಕಪಾಡಿ ತಂಡದ ವಿರುದ್ಧ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

12 ವರ್ಷಗಳ ಗ್ರಾಮೀಣ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಂತಿಮ ಪಂದ್ಯದಲ್ಲಿ ಸಡನ್ ಡೆತ್‌ನಲ್ಲಿ ಬಲ್ಲಮಾವಟಿ ತಂಡ ಪ್ರಶಸ್ತಿಗೆ ಮುತ್ತಿಕ್ಕಿದರೆ ಯವಕಪಾಡಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಹಾಕಿ ಪಂದ್ಯಾವಳಿಯ ವಿಜೇತ ತಂಡಕ್ಕೆ ಮಾಳೆಯಂಡ ಚೋಂದಮ್ಮ ಜ್ಞಾಪಕಾರ್ಥ ಅವರ ಮಕ್ಕಳಾದ ಭೀಮಯ್ಯ ಮತ್ತು ಪೊನ್ನಣ್ಣ ಪ್ರಾಯೋಜಿಸಿದ್ದ ಟ್ರೋಫಿ ಹಾಗೂ 30,000 ರು. ನಗದು ಬಹುಮಾನವನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಗಳಿಸಿದ ಯವಕಪಾಡಿ ತಂಡಕ್ಕೆ ಮೂವೇರ ಚಂಗಪ್ಪ ದಂಪತಿ ಜ್ಞಾಪಕಾರ್ಥ ಮೂವೇರ ವಿಜು ಮಂದಣ್ಣ ಪ್ರಾಯೋಜಿಸಿದ ಟ್ರೋಫಿ ಹಾಗೂ 20000 ರುಪಾಯಿ ನಗದು ಬಹುಮಾನ ವಿತರಿಸಲಾಯಿತು.

ಸೆಮಿ ಫೈನಲ್ ಪಂದ್ಯದಲ್ಲಿ ಬೇತು ತಂಡವನ್ನು ಸೋಲಿಸಿ, ಯವಕಪಾಡಿ ತಂಡ ಅಂತಿಮ ಸುತ್ತುಪ್ರವೇಶಿಸಿತ್ತು. ಮರಂದೋಡ ತಂಡವನ್ನು ಮಣಿಸಿ ಬಲ್ಲಮಾವಟಿ ತಂಡ ಫೈನಲ್‌ಗೇರಿತ್ತು. ಬಲ್ಲಮಾವಟಿ, ನಾಪೋಕ್ಲು, ಕಕ್ಕಬ್ಬೆ-ಕುಂಜಿಲ ಮತ್ತು ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.

ಹಗ್ಗಜಗ್ಗಾಟ ಫಲಿತಾಂಶ: ಅಂತರ ಗ್ರಾಮ ಮಹಿಳೆಯರ ಹಗ್ಗಜಗ್ಗಾಟ ಅಂತಿಮ ಸ್ಪರ್ಧೆ ಬಲ್ಲಮಾವಟಿ ಮತ್ತು ನಾಪೋಕ್ಲು ತಂಡಗಳ ನಡುವೆ ನಡೆಯಿತು.ಬ ಲ್ಲಮಾವಟಿ ತಂಡ ಪ್ರಶಸ್ತಿ ಗಳಿಸಿದರೆ ನಾಪೋಕ್ಲು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪ್ರಥಮ ಸ್ಥಾನ ಪಡೆದ ಬಲ್ಲಮಾವಟಿಟಿ ತಂಡಕ್ಕೆ ಚೀಯಂಡಿರ ಗಣಪತಿ ಜ್ಞಾಪಕಾರ್ಥ ಅವರ ಮಗ ದಿನೇಶ್ ಗಣಪತಿ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು. ರನ್ನರ್ ಅಪ್ ಪ್ರಶಸ್ತಿ ಗಳಿಸಿದ ನಾಪೋಕ್ಲು ತಂಡಕ್ಕೆ ಮಚ್ಚುರ ಮಂದಣ್ಣ ಅವರ ಜ್ಞಾಪಕಾರ್ಥ ಅವರ ಮಗ ಯದು ಮಂದಣ್ಣ ಪ್ರಾಯೋಜಿಸಿದ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

ಅಂತರ ಪ್ರೌಢಶಾಲಾ ಹಾಕಿ ಟೂರ್ನಿಯಲ್ಲಿ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ತಂಡವು ಪ್ರೌಢಶಾಲೆ ಕಕ್ಕಬ್ಬೆ ಪ್ರೌಢಶಾಲಾ ತಂಡವನ್ನು 4- 1 ರ ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮುಖ್ಯ ಅತಿಥಿ ಮೇಜರ್ ಜನರಲ್ ಮೂವೇರ್ ನಂಜಪ್ಪ ಮಾತನಾಡಿ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟ ಸಹಕಾರಿ. ಕ್ರೀಡಾಕೂಟದ ಆಯೋಜನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ನಾಲ್ನಾಡ್ ಹಾಕಿ ಕ್ಲಬ್ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕುಟುಂಬದ ಪ್ರಯೋಜಕತ್ವದಲ್ಲಿ ಗ್ರಾಮೀಣ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ವಿವಿದ ಜನಾಂಗಗಳ ಕ್ರೀಡಾ ಪ್ರತಿಭೆ ಹೊರಹೊಮ್ಮಲು ಪಂದ್ಯಾವಳಿ ಸಹಕಾರಿ ಆಗಲಿದೆ ಎಂದರು. ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳ ಯುವ ಆಟಗಾರರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಕ್ಲಬ್ ವತಿಯಿಂದ ಮಕ್ಕಳಿಗೆ ನುರಿತ ತರಬೇತುದಾರರಿಂದ ಹಾಕಿ ತರಬೇತಿ ನೀಡಲಾಗುವುದು ಎಂದರು.

ನೇತಾಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ಮಾತನಾಡಿ ಕ್ರೀಡಾಕೂಟದ ಮೂಲಕ ಎಲ್ಲ ಕೊಡವ ಭಾಷಿಕ ಜನಾಂಗಗಳಿಗೆ ಪ್ರಯೋಜನವಾಗಲಿದೆ. ಊರು, ನಾಡು, ದೇವಾಲಯಕ್ಕೆ ಗ್ರಾಮಸ್ಥರು ತೆರಿಗೆ ನೀಡುವಂತೆ ಕ್ರೀಡಾಕೂಟಕ್ಕೂ ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ ಹಾಗೂ ಸಮಾಜಸೇವಕ ನುಚ್ಚಿಮಣಿಯಂಡ ಚಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರ ಅಂತರ ಗ್ರಾಮ ಹಗ್ಗಜಗ್ಗಾಟದ ಅಂತಿಮ ಪಂದ್ಯವನ್ನು ನೆಲಜಿ ಮಹಿಳಾ ಸಮಾಜದ ಅಧ್ಯಕ್ಷ ಅಪ್ಪುಮಣಿಯಂಡ ಡೇಸಿ ಸೋಮಣ್ಣ ,ಕಾವೇರಿ ಮಹಿಳಾ ಸಮಾಜದ ಅಧ್ಯಕ್ಕೆ ಅಪ್ಪಚೆಟ್ಟೋಳಂಡ ವನು ವಸಂತ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇದೂರ ಶಾಂತಿ ಉದ್ಘಾಟಿಸಿದರು.

ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಟ್ರೋಫಿ ದಾನಿಗಳಾದ ಮಾಳೆಯಂಡ ಬಿನು ಭೀಮಯ್ಯ,ಮೂವೆರ ವಿನು ಮಂದಣ್ಣ, ಚೀಯಂಡಿರ ದಿನೇಶ್, ಮಚ್ಚುರ ಯದುಕುಮಾರ್ ಉಪಸ್ಥಿತರಿದ್ದರು. ಮನು ವಸಂತ ಪ್ರಾರ್ಥಿಸಿದರು. ಮಿಟ್ಟು ಪೂಣಚ್ಚ ಸ್ವಾಗತಿಸಿದರು. ಮಾಳೆಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ