ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಅಖಿಲ ಭಾರತ ಸುಸಂಘಟಿತ ಕಳೆ ನಿರ್ವಹಣೆ ಪ್ರಾಯೋಜನೆ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ನೂತನ ಅವರೆ ತಳಿ ಹೆಚ್.ಎ-5 ರ ಪರಿಚಯದ ಮುಂಚೂಣಿ ಪ್ರಾತ್ಯಕ್ಷಿಕೆ ನಡೆಯಿತು.
ಇದೇ ವೇಳೆ ರೈತರ ತಾಕಿನಲ್ಲಿ ಕ್ಷೇತ್ರೋತ್ಸವ ಮತ್ತು ಸಮಗ್ರ ಕಳೆ ನಿರ್ವಹಣೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಜಿಕೆವಿಕೆಯ ಅಖಿಲ ಭಾರತ ಸುಸಂಘಟಿತ ಕಳೆ ನಿರ್ವಹಣೆ ಪ್ರಾಯೋಜನೆ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಗೀತಾ ಮಾತನಾಡಿ, ರೈತರು ಬೀಜಗಳನ್ನು ಎರಚದೆ ವೈಜ್ಞಾನಿಕವಾಗಿ ಸಾಲು ಬಿತ್ತನೆ ಮಾಡುವುದರಿಂದ ಅಂತರ ಬೇಸಾಯದ ಚಟುವಟಿಕೆಗಳಿಗೆ ಮುಖ್ಯವಾಗಿ ಕಳೆ ನಿರ್ವಹಣೆಗೆ ಅನುಕೂಲವಾಗುತ್ತದೆಯೆಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರೈತರು ಕಳೆ ನಿರ್ವಹಣೆಯಲ್ಲಿ ಹೆಚ್ಚಾಗಿ ರಾಸಾಯನಿಕ ಕಳೆನಾಶಕಗಳನ್ನು ಬಳಸುತ್ತಿದ್ದಾರೆ. ಅದರ ಬದಲಾಗಿ ಸೂಕ್ತ ಸಮಯದಲ್ಲಿ ಸಾಂಪ್ರದಾಯಿಕ ಪದ್ಧತಿ ಮತ್ತು ಯಾಂತ್ರೀಕರಣವನ್ನು ಅಳವಡಿಸಿಕೊಂಡು ಕಳೆ ನಿರ್ವಹಣೆ ಮಾಡುವುದರಿಂದ ಬೇಸಾಯದ ಖರ್ಚನ್ನು ತಗ್ಗಿಸಿ ಹೆಚ್ಚಿನ ಲಾಭ ಪಡೆಯಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಾಧ್ಯಾಪಕಿ ಡಾ. ಕಮಲಾಬಾಯಿ ಮಾತನಾಡಿ, ರೈತರಿಗೆ ರಾಸಾಯನಿಕ ಕಳೆನಾಶಕಗಳಿಂದ ಮಣ್ಣಿನ ಫಲವತ್ತತೆ ಹಾಗೂ ಗುಣಲಕ್ಷಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೆಂದು ತಿಳಿಸಿದರು.
ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ವೆಂಕಟೇ ಗೌಡ, ಸಮಗ್ರ ಬೆಳೆ ನಿರ್ವಹಣೆ ಕುರಿತು ಮಾತನಾಡಿ, ಬೀಜೋಪಚಾರ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಪ್ರಮಾಣವನ್ನು ಕಡಿಮೆಗೊಳಿಸಬಹುದೆಂದು ಮಾಹಿತಿ ನೀಡಿದರು.ಕೃಷಿ ವಿಸ್ತರಣೆ ವಿಭಾಗದ ವಿಜ್ಞಾನಿ ಡಾ. ಸಾಗರ್ ಎಸ್.ಪೂಜಾರ್, ಅವರೆಯ ನೂತನ ತಳಿ ಹೆಚ್.ಎ-5 ಅನ್ನು ವರ್ಷವಿಡೀ ಬೆಳೆಯಬಹುದು, ಮಣಿ ರೀತಿಯ ಕಾಳುಗಳನ್ನು ಹೊಂದಿದ್ದು, ಬೇಸಿಗೆಯಲ್ಲಿಯೂ ಸಹ ಸೊಗಡನ್ನು ಹೊಂದಿರುತ್ತದೆ. ಕಾಯಿ ಕೊರಕದ ಬಾಧೆಗೆ ನಿರೋಧಕತೆಯನ್ನು ಹೊಂದಿರುತ್ತದೆಯೆಂದು ತಿಳಿಸಿದರು.
ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತ - ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ್ದ ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ಸ್ಪಂದಿಸಿ ಹಲವು ಪೂರಕ ಸಲಹೆಗಳನ್ನು ನೀಡಿದರು. ಪ್ರಗತಿಪರ ರೈತರಾದ ಮುನಿರಂಗಪ್ಪ, ಕಾಂತರಾಜು, ಆಂಜನಪ್ಪ, ಹರೀಶ್ ಮತ್ತಿತರರು ಪಾಲ್ಗೊಂಡರು.8ಕೆಡಿಬಿಪಿ8-ದೊಡ್ಡಬಳ್ಳಾಪುರ ತಾಲೂಕಿನ ಹಿರೇಮುದ್ದೇನಹಳ್ಳಿಯಲ್ಲಿ ಅವರೆ ಬೆಳೆ ಕ್ಷೇತ್ರೋತ್ಸವ ನಡೆಯಿತು.