ಬಳ್ಳಾರಿ: ಒಳಮೀಸಲಾತಿಯ ಪರಿಷ್ಕರಣೆಯ ಹೊಣೆಯನ್ನು ಕೇಂದ್ರ ಸರ್ಕಾರದ ಹೆಗಲಮೇಲೆ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಒಳ ಮೀಸಲಾತಿಯ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕರ್ನಾಟಕ ಮಾದಾರ ಚನ್ನಯ್ಯ ಸೇನೆ ಸಮಿತಿಯ ರಾಜ್ಯಾಧ್ಯಕ್ಷ ಕಲ್ಲುಕಂಬ ಜಯಗೋಪಾಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಒಳಮೀಸಲಾತಿ ಜಾರಿಯ ಭರವಸೆ ನೀಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿತ್ತು. ಆದರೆ, ಇದೀಗ ಕೇಂದ್ರಕ್ಕೆ ಪರಿಷ್ಕರಣೆಗೆ ಕಳಿಸುವುದಾಗಿ ಹೊಸ ನಾಟಕವಾಡುತ್ತಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಪಂಚಪೀಠವು 2020ರಲ್ಲಿ ಆದೇಶ ನೀಡಿದ್ದು, ಒಳ ಮೀಸಲಾತಿ ವಿಷಯ ಆಯಾ ರಾಜ್ಯ ಸರ್ಕಾರದ ಪರದಿಗೆ ಬರುತ್ತದೆ ಎಂದು ಹೇಳಿದೆ. ಈ ಸಂಬಂಧ ಕೇಂದ್ರ ಸರ್ಕಾರ ಆಯಾ ಸರ್ಕಾರಗಳು ಶಿಫಾರಸು ಕಳಿಸುವಂತೆ ಕೇಂದ್ರ ಸೂಚಿಸಿದ್ದರೂ ಸಿದ್ದರಾಮಯ್ಯನವರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇದೀಗ ಪರಿಷ್ಕರಣೆಗೆ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಹೇಳುತ್ತಿದ್ದಾರೆ. ಈ ಮೂಲಕ ದಲಿತ ಸಮುದಾಯವನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.ರಾಜ್ಯ ಸರ್ಕಾರ ನಿಜಕ್ಕೂ ಒಳ ಮೀಸಲಾತಿಯ ಮಾಡುವ ಇಚ್ಛಾಶಕ್ತಿ ಇದ್ದರೆ ಕೂಡಲೇ ಕೇಂದ್ರಕ್ಕೆ ಪರಿಷ್ಕರಣೆ ಕಳಿಸುವ ಬದಲು, ಶಿಫಾರಸು ಮಾಡುವ ನಿಲುವು ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿವೆ ಎಂಬ ಕಾರಣಕ್ಕಾಗಿ ದಲಿತ ಮತಗಳನ್ನು ಹಿಡಿದಿಟ್ಟುಕೊಳ್ಳಲು ಈ ರೀತಿಯ ಸುಳ್ಳುಗಳನ್ನು ಹೇಳಿ, ವಂಚಿಸುವುದನ್ನು ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಜಯಗೋಪಾಲ್ ಅವರು, ಲೋಕಸಭಾ ಚುನಾವಣೆ ಮುನ್ನವೇ ಒಳಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ದಲಿತ ಸಮುದಾಯಗಳಿಗೆ ಮಾಡಿರುವ ಮೋಸ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಮುಖಂಡರಾದ ಎಚ್. ಹನುಮಂತಪ್ಪ ಹಾಗೂ ಬಿ.ಕೆ. ಅನಂತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.