ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಸ್ವಾಂತಂತ್ರ್ಯ ಬಂದ ಮೇಲೆ ಹಾವನೂರು ವರದಿ, ಸದಾಶಿವ ವರದಿ, ಮಾಧುಸ್ವಾಮಿ ಸಮಿತಿಯ ಶಿಫಾರಸು, ಕಾಂತರಾಜ್ ವರದಿ, ನಾಗಮೋಹನ್ ದಾಸ್ ವರದಿ ಎಲ್ಲವನ್ನೂ ಸರ್ಕಾರಗಳು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ ಎಂದು ದೂರಿದರು.
150 ಕೋಟಿ ರು. ತೆರಿಗೆ ಹಣವನ್ನು ಖರ್ಚು ಮಾಡಿ ಕಾಂತರಾಜ್ ವರದಿ ನೀಡಿದರೂ ಅದನ್ನು ಕೂಡ ಜಾರಿಗೊಳಿಸಿಲ್ಲ. ಈಗ ನಾಗಮೋಹನ್ ದಾಸ್ ವರದಿಯನ್ನು ಕೂಡ ಯಥಾವತ್ ಜಾರಿಗೊಳಿಸದೇ ಒಳ ಮೀಸಲಾತಿಯನ್ನು 4 ಭಾಗಗಳಾಗಿ ವಿಂಗಡಿಸಿ ನೀಡಿದ ವರದಿಯನ್ನು 3ಕ್ಕೆ ಸೀಮಿತಗೊಳಿಸಿ ಬಂಜಾರರಿಗೆ ಬಿಜೆಪಿ ಸರ್ಕಾರ ನೀಡಿದ ಶೇ.4.5ರಷ್ಟು ಮೀಸಲಾತಿಯನ್ನು 5.5ರಷ್ಟು ಹೆಚ್ಚಿಸಿ ಅವರೊಂದಿಗೆ ಈಗ 63 ಜಾತಿಗಳನ್ನು ಸೇರಿಸಿ ಅಲೆಮಾರಿ ಜಾತಿಗೆ ಮೀಸಲಿಟ್ಟ ಶೇ.1ರಷ್ಟು ರದ್ದು ಮಾಡಿ ಅದನ್ನೂ ಇವರೊಂದಿಗೆ ಸೇರಿಸಿ ಎಲ್ಲ ಹಿಂದುಳಿದ ಮತ್ತು ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.ವ್ಯಾಪಕ ಪ್ರತಿಭಟನೆ ಬಳಿಕ ಈಗ ಮತ್ತೆ 450 ಕೋಟಿ ರು. ವೆಚ್ಚದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿಗೆ ಹೊರಟಿದ್ದಾರೆ. ಕೇಂದ್ರ ಸರ್ಕಾರ ಕೂಡ ಮುಂದಿನ ತಿಂಗಳಿಂದ ಜನಗಣತಿಗೆ ಆದೇಶ ನೀಡಿದೆ. ವಿಪರ್ಯಾಸ ಎಂದರೆ ಎಲ್ಲೋ ಒಂದು ಕಡೆ ಕಾಣದ ಕೈಗಳು ಲಂಬಾಣಿ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ. ಲಂಬಾಣಿ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಎಂದು ಹಲವಾರು ಉಪಪಂಗಡಗಳಿಗೆ ಕ್ರಿಶ್ಚಿಯನ್ ಜಾತಿಯನ್ನು ಲಗತ್ತಿಸಿ ಹಿಂದುಗಳನ್ನು ಒಡೆಯುವ ಕುತಂತ್ರ ಮಾಡುತ್ತಿದೆ. ಇದರಿಂದ ಒಟ್ಟಾರೆಯಾಗಿ ಆ ಜಾತಿಯ ಜನಸಂಖ್ಯೆ ಕಡಿಮೆ ನಮೂದು ಆಗುವುದರಿಂದ ಅವರಿಗೆ ಸಿಗಬೇಕಾದ ಶೇಕಡವಾರು ಮೀಸಲಾತಿಯಲ್ಲಿ ಕಡಿಮೆಯಾಗಿ ವಂಚಿತರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆ.ಜೆ.ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ 10ಕ್ಕೂ ಅಧಿಕ ತಾಂಡಾಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.