ಚಿತ್ರದುರ್ಗ: ನಾಗಮೋಹನ್‍ದಾಸ್ ಆಯೋಗದ ವರದಿ ಅವೈಜ್ಞಾನಿಕವಾಗಿರುವುದರಿಂದ ಒಳ ಮೀಸಲಾತಿಯಲ್ಲಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಸೆ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಸಮಿತಿಯಿಂದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸೋದರ ಸಮಾಜಗಳ ನಡುವೆ ಒಳ ಮೀಸಲಾತಿಯ ಕಿಚ್ಚು ಹಚ್ಚಿರುವ ರಾಜ್ಯದ ಮುಖ್ಯಮಂತ್ರಿ ಅಹಿಂದಾ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ಒತ್ತಡಕ್ಕೆ ಮಣಿದು ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ. ಜನಗಣತಿ ದತ್ತಾಂಶದಲ್ಲಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಏಕೆ ಎಂದು ಪ್ರಶ್ನಿಸಿದರು?ಸಣ್ಣ ಸಣ್ಣ ಸಮುದಾಯಗಳಿಗೆ ಒಳ ಮೀಸಲಾತಿಯಿಂದ ಅನ್ಯಾಯವಾಗಿರುವುದರಿಂದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡಿ ರಾಜ್ಯ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸೋಣ ಎಂದು ಸೋದರ ಸಮಾಜದವರಲ್ಲಿ ಮನವಿ ಮಾಡಿದರು.
ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಸಮಿತಿ ಸಂಚಾಲಕ ಆರ್.ನಿಂಗಾನಾಯ್ಕ ಮಾತನಾಡಿ, ನಾಗಮೋಹನ್‍ದಾಸ್ ಆಯೋಗ ಅವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ. ಮೈಸೂರಿನ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ನಮಗೆ ಮೀಸಲಾತಿಯನ್ನು ಕೊಟ್ಟವರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿಯನ್ನು ಕೊಟ್ಟರೆ ವಿನಃ ಒಳ ಮೀಸಲಾತಿ ಎನ್ನುವ ಪದವನ್ನು ಎಲ್ಲಿಯೂ ಹೇಳಿಲ್ಲ. ಮಾಧುಸ್ವಾಮಿ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರ ಸ್ವೀಕರಿಸಲಿಲ್ಲ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ಲಂಬಾಣಿ ಜನಾಂಗ ಮುಂದುವರಿದಿದೆ ಎಂದು ಸರ್ಕಾರಕ್ಕೆ ಆಯೋಗ ತಪ್ಪು ವರದಿ ನೀಡಿ ಗೊಂದಲ ಸೃಷ್ಟಿಸಿದೆ. ಅದಕ್ಕಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆಂದು ತಿಳಿಸಿದರು.63 ಜಾತಿಗಳನ್ನು ನಮ್ಮ ಜೊತೆ ಸೇರಿಸಲಾಗಿದ್ದು, ಮೀಸಲಾತಿಯನ್ನು ಹೆಚ್ಚಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೊಂದಲ ಉಂಟು ಮಾಡಿದ್ದಾರೆ. ಮೀಸಲಾತಿಯಿಂದ ವಂಚಿತರಾಗಿ ಕೆನೆ ಪದರದಲ್ಲಿರುವವರಿಗೆ ಮೀಸಲಾತಿಯನ್ನು ಕೊಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ. 63 ಸಮುದಾಯಗಳಿಗೆ ಶೇ.7 ರಷ್ಟಾದರೂ ಮೀಸಲಾತಿಯನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಕೂಡ್ಲಿಗಿ ಬಂಜಾರ ಪೀಠದ ಶಿವಪ್ರಕಾಶ್ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಸ್ಥಿತಿಗತಿ ಗೊತ್ತಿದೆ. ಯಾರದೋ ಒತ್ತಡಕ್ಕೆ ಮಣಿದು ಅವಸರದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಸಮಾಜವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಶೇ.5 ರಷ್ಟು ಮೀಸಲಾತಿ ಬದಲಿಗೆ ಶೇ.7ರಷ್ಟು ನೀಡಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.ಕೊರಚ ಸಮಾಜದ ಕೃಷ್ಣಪ್ಪ ಮಾತನಾಡಿ, ಭೋವಿ, ಲಂಬಾಣಿ, ಕೊರಚ, ಕೊರಮ ಸಮಾಜ ಜನಸಂಖ್ಯೆಯಲ್ಲಿ ಜಾಸ್ತಿಯಿದ್ದರೂ ನಾಗಮೋಹನ್‍ದಾಸ್ ಆಯೋಗ ಸಂಗ್ರಹಿಸಿರುವ ದತ್ತಾಂಶದಲ್ಲಿ ಕಡಿಮೆ ಜನಸಂಖ್ಯೆಯನ್ನು ತೋರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಪರಮ ಅನ್ಯಾಯ. ಅವಸರದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಅಪಾಯಕಾರಿ. ಇದೇ ತಿಂಗಳ 10 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಂಡು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ಪ್ರದರ್ಶಿಸಬೇಕು. ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆಂದು ಭರವಸೆ ನೀಡಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಇದು ಅಳಿವು-ಉಳಿವಿನ ಪ್ರಶ್ನೆ. ಪರಿಶಿಷ್ಟ ಜಾತಿಯಿಂದ ಗೆದ್ದು ಶಾಸಕ, ಸಚಿವ ಸಂಸದರಾಗಿರುವವರು ನಮ್ಮ ಪರ ಧ್ವನಿ ಎತ್ತುತ್ತಿಲ್ಲ. ಬೇಡ ಜಂಗಮರನ್ನು ಎಸ್ಸಿಗೆ ಸೇರಿಸಿ ಸರ್ಟಿಫಿಕೇಟ್ ಕೊಟ್ಟಿರುವುದನ್ನು ವಜಾಗೊಳಿಸಿ ಕ್ರಿಮಿನಲ್ ಕೇಸು ದಾಖಲಿಸುವಂತೆ ಒತ್ತಾಯಿಸಿದರು.ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಾನಾಯ್ಕ, ಗಿರೀಶ್‍ನಾಯ್ಕ, ಜಿಪಂ ಮಾಜಿ ಸದಸ್ಯ ರಾಜಾನಾಯ್ಕ, ತಾಪಂ ಮಾಜಿ ಸದಸ್ಯ ಸುರೇಶ್‍ನಾಯ್ಕ. ಮಂಜುನಾಥನಾಯ್ಕ ವೀಣಬಾಯಿ, ಗೀತ, ರವಿಕುಮಾರ್‍ನಾಯ್ಕ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಮೇಶ್, ತಿಪ್ಪೇಶ್‍ನಾಯ್ಕ, ಜಯರಾಂನಾಯ್ಕ, ಗೋವಿಂದನಾಯ್ಕ ಮತ್ತಿತರರಿದ್ದರು.