ಮನೆ ಬಾಗಿಲಿಗೆ ಬರುವ ಪೊಲೀಸರನ್ನು ಸ್ವಾಗತಿಸಿ

KannadaprabhaNewsNetwork |  
Published : Jul 31, 2025, 12:45 AM IST
4 | Kannada Prabha

ಸಾರಾಂಶ

ನಾಗರಿಕರು ಹಾಗೂ ಪೊಲೀಸರ ನಡುವಿನ ಸಂಬಂಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶವೇ ಇಲ್ಲ

ಕನ್ನಡಪ್ರಭ ವಾರ್ತೆ ಮೈಸೂರುಸಮಸ್ಯೆಗಳನ್ನು ಅರಿಯಲು ಮನೆ ಬಾಗಿಲಿಗೆ ಬರುವ ಪೊಲೀಸರನ್ನು ನಾಗರಿಕರು ಸ್ವಾಗತಿಸಬೇಕು. ಪೊಲೀಸರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು. ಅವರ ಕರ್ತವ್ಯಕ್ಕೆ ಸಹಕಾರ ನೀಡಬೇಕು. ಆಗ ಮಾತ್ರ ಉತ್ತಮವಾದ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಐಸಿಸಿ ಮ್ಯಾಚ್ ರೆಫರಿ, ಅಂತಾರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ತಿಳಿಸಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಗರದ ಪೊಲೀಸ್ ಘಟಕವು ಬುಧವಾರ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕರು ಹಾಗೂ ಪೊಲೀಸರ ನಡುವಿನ ಸಂಬಂಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶವೇ ಇಲ್ಲವಾಗುತ್ತದೆ. ಹೀಗಾಗಿ, ನಾಗರಿಕರು ಮತ್ತು ಪೊಲೀಸರ ನಡುವೆ ಸ್ನೇಹ- ಬಾಂಧವ್ಯದ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.ರಾಜ್ಯ ಸರ್ಕಾರ ರೂಪಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆಯು ಉತ್ತಮವಾಗಿದೆ. ಇದರ ಮೂಲಕ ಪೊಲೀಸರು ಜನರ ಮನೆಗಳಿಗೆ ಹೋಗಿ ಬರುವುದರಿಂದ ನಾಗರಿಕರಿಗೂ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅರಿವು ಮೂಡುತ್ತದೆ. ಪೊಲೀಸರ ಕಾರ್ಯದ ಬಗ್ಗೆಯೂ ತಿಳವಳಿಕೆ ಮೂಡುತ್ತದೆ ಎಂದರು.ಅಲ್ಲದೆ, ಸಮಾಜದಲ್ಲಿ ಬೇರೂರಿರುವ ಕೆಲವು ನಕಾರಾತ್ಮಕ ಧೋರಣೆಗಳು ಅಂದರೆ ಪೊಲೀಸರು ಯಾರ ಮನೆಗೆ ಬಂದರೂ ಅಕ್ಕಪಕ್ಕದವರು ಒಂದು ರೀತಿ ಏನು ಆಗಿದೆ ಎನ್ನುವಂತೆ ನೋಡುವುದು, ಇಂತಹವುಗಳಲ್ಲ ಕಡಿಮೆಯಾಗುತ್ತವೆ. ಪೊಲೀಸ್ ಇಲಾಖೆ ಬಗ್ಗೆ ಧನಾತ್ಮಕ ಚಿಂತನೆ ಮೂಡುತ್ತದೆ ಎಂದು ಅವರು ಹೇಳಿದರು.ಪೊಲೀಸರ ಕೆಲಸ ದೂರದಿಂದ ನೋಡಿದರೆ ಏನು ಗೊತ್ತಾಗುವುದಿಲ್ಲ. ಬಹಳ ಹತ್ತಿರದಿಂದ ಗಮನಿಸಿದರೇ ಅವರ ಸಂಕಷ್ಟ, ಕರ್ತವ್ಯ ನಿಭಾಯಿಸುವ ರೀತಿ ಎಲ್ಲವೂ ತಿಳಿಯುತ್ತದೆ. 2010 ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿಯಾದಾಗ ಪೊಲೀಸರೊಂದಿಗೆ ಸಂಪರ್ಕ ಬೆಳೆಯಿತು. ಆವಾಗ ಪೊಲೀಸ್ ಕೆಲಸ ಎಷ್ಟು ಕಷ್ಟ ಎಂದು ಗೊತ್ತಾಯಿತು. ಪೊಲೀಸರ ಕೆಲಸ ಜನರಿಗೂ ತಿಳಿಸಬೇಕು. ಅದಕ್ಕಾಗಿ ಜನರು ಪೊಲೀಸರ ನಡುವೆ ಇರುವ ಅಂತರ ಕಡಿಮೆ ಮಾಡುವ ಕೆಲಸ ಆಗಬೇಕಾಗಿದೆ ಎಂದು ಅವರು ತಿಳಿಸಿದರು. 250 ಮನೆ ಜವಾಬ್ದಾರಿನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಮನೆ ಮನೆಗೆ ಪೊಲೀಸ್ ಯೋಜನೆಯಲ್ಲಿ ಪ್ರತಿ ಬೀಟ್ ಪೊಲೀಸರಿಗೆ ಕ್ಲಸ್ಟರ್‌ ಗಳನ್ನು ಮಾಡಿ ಸುಮಾರು 250 ಮನೆಯ ಜವಾಬ್ದಾರಿ ನೀಡಿದ್ದೇವೆ. ಈ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಪಡೆಯುತ್ತಾರೆ. ಅಲ್ಲದೆ, ತಮ್ಮ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ನಾಗರಿಕರು ಯಾವ ರೀತಿ ಎಚ್ಚರ ವಹಿಸಬೇಕು. ಅಪರಾಧ ಪ್ರಕರಣಗಳು ಕಡಿಮೆಯಾಗುವ ನಿಟ್ಟಿನಲ್ಲಿ ಯಾವ ರೀತಿಯ ಸಹಕಾರ ನೀಡಬೇಕು. ಆ ಪ್ರದೇಶದಲ್ಲಿ ಯಾವ ರೀತಿಯ ಪ್ರಕರಣಗಳು ಆಗಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.ಬೀಟ್ ಪೊಲೀಸರು ಮನೆಗಳಲ್ಲಿ ಸಮಸ್ಯೆಗಳನ್ನು ಆಲಿಸುತ್ತಾರೆ. ಇದಲ್ಲದೇ ಪಾಸ್‌ ಪೋರ್ಟ್ ಪರಿಶೀಲನೆ ಅಂತಹ ಕಾರ್ಯಗಳನ್ನು ಮಾಡುತ್ತಾರೆ. ಮನೆಗಳ ಸಮಸ್ಯೆಯನ್ನು ಕ್ಯೂಆರ್ ಕೋಡ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಅಧಿಕಾರಿಗಳು ಆ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದರು.ಜನರು ಊರಿನ ಅನುಮಾನಾಸ್ಪದ ವಿಷಯಗಳ ಕುರಿತು ಮಾಹಿತಿ ನೀಡಬಹುದು. ಪುರುಷರಿಲ್ಲದ ಮನೆಗೆ ಮಹಿಳಾ ಪೊಲೀಸರನ್ನು ಕಳುಹಿಸಲಾಗುತ್ತದೆ. 250 ಮನೆಗಳಿಗೆ ಒಬ್ಬರು ಸಲಹೆಗಾರರನ್ನು ಆಯ್ಕೆ ಮಾಡಿ ಅವರೊಂದಿಗೆ ಪ್ರತೀ ಶನಿವಾರ ಸಭೆ ನಡೆಸಲಾಗುತ್ತದೆ. ಈ ಸಲಹೆಗಾರರಲ್ಲಿ ಒಬ್ಬರನ್ನು ಅತ್ಯುತ್ತಮ ಪೊಲೀಸ್ ಸ್ನೇಹಿತ, ಸಲಹೆಗಾರ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ ಎಂದು ಅವರು ತಿಳಿಸಿದರು.ಇದೇ ವೇಳೆ ಮನೆ ಮನೆಗೆ ಪೊಲೀಸ್ ಯೋಜನೆ ಕುರಿತ ಸ್ಟಿಕರ್, ಪೋಸ್ಟರ್‌ ಗಳನ್ನು ಬಿಡುಗಡೆಗೊಳಿಸಲಾಯಿತು.ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಎಸಿಪಿಗಳಾದ ರಮೇಶ್ ಕುಮಾರ್, ಅಶ್ವತ್ಥನಾರಾಯಣ್, ರಾಜೇಂದ್ರ, ರವಿಪ್ರಸಾದ್, ಶಿವಶಂಕರ್, ಸ್ನೇಹಾ ರಾಜ್ ಇದ್ದರು. ಮೇಟಗಳ್ಳಿ ಠಾಣೆಯ ಎಸ್‌ಐ ಎಸ್.ಎಸ್. ಲತಾ ನಿರೂಪಿಸಿದರು.----ಕೋಟ್...ಮನೆ ಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಒಬ್ಬ ಪೇದೆಗೆ 250 ಮನೆಗಳ ಜವಾಬ್ದಾರಿಯನ್ನು ವಹಿಸಲಾಗಿರುತ್ತದೆ. ಅಷ್ಟೂ ಕುಟುಂಬದಲ್ಲಿ ಇರುವ ಮುಖ್ಯವಾದವರ ಹೆಸರನ್ನು ಪೊಲೀಸ್ ಸಿಬ್ಬಂದಿಗೆ ಗುರುತು ಇರಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಆ 250 ಕುಟುಂಬದವರಿಗೂ ನಮ್ಮನ್ನು ರಕ್ಷಿಸುತ್ತಿರುವ ಪೊಲೀಸರ ಹೆಸರು ನೆನಪಿಟ್ಟುಕೊಂಡರೇ ಅದುವೇ ದೊಡ್ಡ ಯಶಸ್ಸು.- ಜಾವಗಲ್ ಶ್ರೀನಾಥ್, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ----ಪೊಲೀಸರು ನಾಗರಿಕರ ಹಕ್ಕುಗಳ ರಕ್ಷಕರು. ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಮಾಜದ ಬೆಂಬಲ ಅಗತ್ಯ. ಇದರಿಂದಾಗಿ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಸಾಧಿಸಬಹುದು. ಹೀಗಾಗಿ, ಪೊಲೀಸ್ ಇಲಾಖೆಗೆ ನಾಗರಿಕರ ಸಹಕಾರ, ಸ್ನೇಹ- ಬಾಂಧವ್ಯ ಅಗತ್ಯ.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...