ಕೋನರಡ್ಡಿ ಚಕ್ಕಡಿ ರಸ್ತೆಗೆ ಅಂತಾರಾಷ್ಟ್ರೀಯ ಜಲತಜ್ಞ ಮೆಚ್ಚುಗೆ

KannadaprabhaNewsNetwork | Published : Nov 8, 2023 1:03 AM

ಸಾರಾಂಶ

ಅಂತಾರಾಷ್ಟ್ರೀಯ ಜಲತಜ್ಞ, ನೀರಿನ ಗಾಂಧಿ ಎಂದೇ ಹೆಸರಾಗಿರುವ ವಿಶ್ವಸಂಸ್ಥೆಯ ಬರ ಮತ್ತು ನೆರೆ ಅಧ್ಯಯನ ಸಮಿತಿಯ ಅಧ್ಯಕ್ಷ ಡಾ. ರಾಜೇಂದ್ರ ಸಿಂಗ್ ನವಲಗುಂದ ಮತಕ್ಷೇತ್ರಕ್ಕೆ ಭೇಟಿ ನೀಡಿ ನಮ್ಮ ಹೊಲ ನಮ್ಮ ರಸ್ತೆ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಚಕ್ಕಡಿ ರಸ್ತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ನವಲಗುಂದ

ಅಂತಾರಾಷ್ಟ್ರೀಯ ಜಲತಜ್ಞ, ನೀರಿನ ಗಾಂಧಿ ಎಂದೇ ಹೆಸರಾಗಿರುವ ವಿಶ್ವಸಂಸ್ಥೆಯ ಬರ ಮತ್ತು ನೆರೆ ಅಧ್ಯಯನ ಸಮಿತಿಯ ಅಧ್ಯಕ್ಷ ಡಾ. ರಾಜೇಂದ್ರ ಸಿಂಗ್ ನವಲಗುಂದ ಮತಕ್ಷೇತ್ರಕ್ಕೆ ಭೇಟಿ ನೀಡಿ ನಮ್ಮ ಹೊಲ ನಮ್ಮ ರಸ್ತೆ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಚಕ್ಕಡಿ ರಸ್ತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬರ ಪರಿಶೀಲನೆಗೆ ಆಗಮಿಸಿದ್ದ ಅವರಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಪಡೆಸೂರ, ತಿರ್ಲಾಪುರ ಸೇರಿ ತಾಲೂಕಿನಲ್ಲಿ ನಿರ್ಮಿಸಿರುವ ಚಕ್ಕಡಿ ರಸ್ತೆಗಳನ್ನು ತೋರಿಸಿದರು. ಇದಕ್ಕೆ ಸ್ಥಳೀಯ ಮುರ್ರಂ ಮತ್ತು ಅದಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸ್ಥಳೀಯವಾಗಿಯೇ ಉಪಯೋಗಿಸಲಾಗುತ್ತಿದೆ. ರೈತರ ಸಹಭಾಗಿತ್ವದೊಂದಿಗೆ ಜನರ ಸಹಕಾರದೊಂದಿಗೆ ಈ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.

೫ ವರ್ಷಗಳಲ್ಲಿ ೫೦೦ ಕಿ.ಮೀ. ರೈತರ ಹೊಲಗಳಿಗೆ ರಸ್ತೆ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ೧೧೦ ಕಿ.ಮೀ. ಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಇದಕ್ಕೆ ರಾಜೇಂದ್ರ ಸಿಂಗ್ ಅವರು ಭಾರಿ ಸಂತಸ ವ್ಯಕ್ತಪಡಿಸಿ ರೈತರ ಸಹಭಾಗಿತ್ವ ಇದ್ದರೆ ಇಂತಹ ಮಾದರಿ ಕೆಲಸಗಳು ಆಗುತ್ತವೆ. ಇಲ್ಲಿಯ ರೈತರ ಸಹಕಾರದಿಂದ ಕೆಲಸಗಳು ನಡೆಯಲು ಸಾಧ್ಯ ಎಂದರು.

ಮುಂಬರುವ ದಿನಗಳಲ್ಲಿ ನವಲಗುಂದ ಕ್ಷೇತ್ರವನ್ನು ಬರ ಮುಕ್ತ ಕ್ಷೇತ್ರವನ್ನಾಗಿಸಲು ಮಾಡಲು ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಪ್ರತಿಜ್ಞಾವಿದಿ ಬೋಧಿಸಿದರು.

ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸುವುದು ಸರಿಯಲ್ಲ. ಸರ್ಕಾರ ಮಾಡುವುದನ್ನು ಮಾಡುತ್ತದೆ, ಜನರು ಮಾಡಬೇಕಾದುದ್ದನ್ನು ಮಾಡಬೇಕಾಗುತ್ತದೆ. ಜನರಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬರ ಸುಳಿಯದಂತೆ ಮಾಡುವದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದಾಗ ಜನ ಹರ್ಷೋದ್ಗಾರದೊಂದಿಗೆ ಸಮ್ಮತಿ ನೀಡಿದರು.

ರಸ್ತೆ ಮತ್ತು ನೀರು ರೈತರಿಗೆ ಅತ್ಯಂತ ಅವಶ್ಯವಾಗಿವೆ. ಪ್ರತಿ ಹಂತದಲ್ಲಿಯೂ ರೈತರ ಜೊತೆಗಾರನಾಗಿರುತ್ತದೆ. ಇವೆರಡು ಇದ್ದರೆ ಅಲ್ಲಿಯ ರೈತರು ಸಮೃದ್ಧಿ ಕಾಣುತ್ತಾರೆ. ಆ ಕೆಲಸ ಇಲ್ಲಿ ನಡೆಯುತ್ತಿದೆ. ಇಂತಹ ರಚನಾತ್ಮಕ ಕೆಲಸಗಳು ಇನ್ನಷ್ಟು ನಡೆದು ಬರ ಮುಕ್ತ ಪ್ರದೇಶವನ್ನಾಗಿ ಮಾಡುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಸ್ವರೂಪಾ ಟಿ.ಕೆ., ತಹಸೀಲ್ದಾರ ಸುಧೀರ ಸಾವಕಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭ್ಯಾಗ್ಯಶ್ರೀ ಜಾಗೀರದಾರ, ಗ್ರಾಪಂ ಅಧ್ಯಕ್ಷ ಬಸವರಾಜ ಆಕಳದ, ಗ್ರಾಪಂ. ಸದಸ್ಯರಾದ ಸಿದ್ದಪ್ಪ ಮರಿಸಿದ್ದಣ್ಣವರ, ಮುಖಂಡರಾದ ಬಾಬು ಕಾಲವಾಡ, ಹೇಮಣ್ಣ ಕುರ್ಲಗೇರಿ, ಎಂ.ಎಸ್. ರೋಣದ, ರಮೇಶ ನವಲಗುಂದ, ಬಸವರಾಜ ಕಾಮರಡ್ಡಿ, ಯಶವಂತಗೌಡ ಪಾಟೀಲ, ಭೀಮರಡ್ಡಿ ಈರಡ್ಡಿ, ಶಿವಪ್ಪ ಅಮ್ಮಿನಭಾವಿ, ಅಡಿವೆಪ್ಪ ಮಂದಲ, ಮಂಜು ಮಡಿವಾಳರ, ವೈ.ಎಸ್. ನವಲಗುಂದ, ರಾಜು ಮಂಕಣಿ, ಬಿ.ಸಿ. ಹೆಬಸೂರ, ವಿಷ್ಣು ಕಾಲವಾಡ, ಪ್ರಕಾಶ ಶಿಗ್ಲಿ, ಮಾಂತೇಶ ಭೋವಿ, ಜೀವನ ಪವಾರ, ರಾಘು ಮೇಟಿ, ಆರ್.ಎಲ್. ಮಂಕಣಿ ಹಾಗೂ ನೀರಾವರಿ, ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಪ್ರತಿಜ್ಞೆ:

ನಾವು ನವಲಗುಂದ ಮತಕ್ಷೇತ್ರವನ್ನು ಬರಮುಕ್ತ ಕ್ಷೇತ್ರವನ್ನಾಗಿ ಮಾಡಲು ಸಮಾಜ, ಶಾಸಕ ಹಾಗೂ ಸರ್ಕಾರ ಸಹಭಾಗಿತ್ವದೊಂದಿಗೆ ಶ್ರಮಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿದರು. ಇದೊಂದು ಅಪರೂಪದ ಕ್ಷಣವಾಗಿದ್ದು, ಅಂತಾರಾಷ್ಟ್ರೀಯ ಜಲ ತಜ್ಞ ರಾಜೇಂದ್ರ ಸಿಂಗ್ ಅವರ ಈ ನಡೆ ಕ್ಷೇತ್ರದ ಜನರಲ್ಲಿ ವಿಶೇಷವಾಗಿ ರೈತರಲ್ಲಿ ಹೊಸ ಸಂಚಲನ ಮೂಡಿಸಿತ್ತು.

Share this article