ಉಡುಪಿ: ಭಾರತದ ಸಂವಿಧಾನದ 51, 53 ಮತ್ತು 73ನೇ ವಿಧಿಗಳ ಅಡಿಯಲ್ಲಿ ಕಾರ್ಯಾಂಗ ಹಾಗೂ ವಿಧಿ 253ರ ಆಡಿಯಲ್ಲಿ ಸಂಸತ್ತು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ದೇಶಿಯ ಮಟ್ಟದಲ್ಲಿ ಜಾರಿಗೆ ತರುವ ಅಧಿಕಾರ ಹಾಗೂ ಜವಾಬ್ದಾರಿ ಹೊಂದಿದೆ ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಕೆ. ನಾಗರಾಜ ಹೇಳಿದರು. ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯವು ಆಯೋಜಿಸಿದ್ದ ಪದ್ಮ ಶ್ರೀ ಡಾ.ಟಿ.ಎಂ.ಎ. ಪೈ ದತ್ತಿ ಉಪನ್ಯಾಸದ “ದೇಶಿಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಕಾನೂನು: ಭಾರತೀಯ ಅನುಭವ,” ಎಂಬ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯ ದೃಷ್ಟಿಕೋನದಿಂದ ದೇಶಿಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕಾನೂನಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ದೇಶಿಯ ನ್ಯಾಯಾಲಯಗಳು ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರುವಾಗ ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸದೆ ಹಾಗೂ ಸಂಘರ್ಷವನ್ನುಂಟು ಮಾಡದೆ ಸಾಮರಸ್ಯ ವ್ಯಾಖ್ಯಾನದ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ದೇಶಿಯ ಕಾನೂನಿನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಇದಕ್ಕೆ ಉದಾಹರಣೆ ಎಂದರೆ ವಿಶಾಖ ವಿರುದ್ಧ ರಾಜಸ್ಥಾನ ರಾಜ್ಯ ಪ್ರಕರಣದಲ್ಲಿ ಜಾಗತಿಕ ಬಾಧ್ಯತೆಯನ್ನು ದೇಶಿಯ ಕಾನೂನಿನೊಳಗೆ ಒಗ್ಗೂಡಿಸುವ ಕಾರ್ಯವನ್ನು ನ್ಯಾಯಾಲಯ ಮಾಡಲಾಯಿತು. ಅಲ್ಲದೆ ಅಂತಾರಾಷ್ಟ್ರೀಯ ಕಾನೂನಿನ ಪದ್ದತಿಗಳಾದ ಮುನ್ನೆಚ್ಚರಿಕೆ ತತ್ವ ಮತ್ತು ಮಾಲಿನ್ಯಕಾರನೇ ಪಾವತಿಸುವ ತತ್ವಗಳನ್ನು ನ್ಯಾಯಾಲಯ ದೇಶಿಯ ಕಾನೂನಿನ ಭಾಗವಾಗಿ ತಮ್ಮ ತೀರ್ಪಗಳಲ್ಲಿ ಆಳವಡಿಸಿವೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಖಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ರೋಹಿತ್ ಎಸ್. ಅಮೀನ್, ಪಶ್ಚಿಮ ಬಂಗಾಳದ ನ್ಯಾಷನಲ್ ಸ್ಕೂಲ್ ಆಫ್ ಜುರಿಡಿಕ್ಕಲ್ ಸೈನ್ಸ್ ನ ಕಾನೂನು ಪ್ರಾಧ್ಯಾಪಕ ಪ್ರೊ. ಸಂದೀಪ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಲಕ್ಷ್ಮೀ ರಾವ್ ಪರಿಚಯಿಸಿದರು, ರಿಶಾಲಿ ಹೆಗ್ದೆ ಸ್ವಾಗತಿಸಿದರು. ವಿಭಾ ವಂದಿಸಿದರು. ಜೆನ್ನಿಷಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಚೈತ್ರ ಕುಮಾರಿ ಎ. ಕಾರ್ಯಕ್ರಮ ಸಂಯೋಜಿಸಿದರು.