ಕನ್ನಡ ಪ್ರಭ ವಾರ್ತೆ ಮುಧೋಳ
ನಕಲಿ ಆರ್‌ಎಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಒಂಬತ್ತು ಜನ ವಂಚಕರನ್ನು ಬಂಧಿಸಿರುವ ಮುಧೋಳ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ದೇವದುರ್ಗದ ಮಹಮ್ಮದ ವಶೀಮ್, ಹೈದ್ರಾಬಾದಿನ ಮುನೀರ್ ಮತ್ತು ಹೀಮಾಯತ್, ದೆಹಲಿಯ ಮಹ್ಮದ ಅಲಿ, ನಿಪ್ಪಾಣಿಯ ವಿಕಾಸ ಚವ್ಹಾಣ ಮತ್ತು ಸಂತೋಷ ಬಳ್ಳೊಳ್ಳೆ, ಬೆಳಗಾವಿಯ ಜಹೀರಅಬ್ಬಾಸ್, ನದೀಮ್ ಮತ್ತು ಇಕ್ಬಾಲ್ ಬಂಧಿತ ಆರೋಪಿಗಳು.
ಎವರ್ ಕ್ರೇಸ್ಟ್ ಇಂಡಸ್ಟ್ರಿ ಎಲ್‌ಎಲ್‌ಪಿಪಿಆರ್ ದಾರಿವಾಲ ಕಂಪನಿಯ ಸೀನಿಯರ್ ಸೇಲ್ಸ್ ಸೂಪರ್‌ವೈಸರ್ ಮಹಾಂತೇಶ ಮಲ್ಲಪ್ಪ ಮೂಲಿಮನಿ ಎಂಬುವವರು, ನಕಲಿ ಆರ್‌ಎಂಡಿ ಪಾನ್ ಮಸಾಲಾ ಮತ್ತು ಎಂ. ಗೋಲ್ಡ್ ಸೈನೆಟೆಡ್ ಟೊಬ್ಯಾಕೋ ಪೌಚ್‌ಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮುಧೋಳ ಪೊಲೀಸ್ ಠಾಣೆಯಲ್ಲಿ 2024ರ, ಮಾರ್ಚ್ 27ರಂದು ದೂರು ನೀಡಿದ್ದರು.ಈ ದೂರು ದಾಖಲಿಸಿಕೊಂಡ ಮುಧೋಳ ಸಿಪಿಐ ಆರ್.ಆರ್. ಪಾಟೀಲ ನೇತೃತ್ವದಲ್ಲಿ ಮುಧೋಳ ಪಿಎಸ್ಐ ರಮೇಶ ಪಾಟೀಲ ಮತ್ತು ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಆರ್.ಬಿ. ಕಟಗೇರಿ, ಬೀರಪ್ಪ ಕುರಿ, ಹಣಮಂತ ಮಾದರ, ಮಾರುತಿ ದಳವಾಯಿ, ದಾದಾಫೀರ್ ಅತ್ರಾವತ್, ಎಚ್.ವೈ. ಕೋಳಿ, ಎಸ್.ವೈ. ಐದಮನಿ ಒಳಗೊಂಡ ತಂಡವನ್ನು ರಚಿಸಿ ತನಿಖೆ ಕೈಗೊಂಡು ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿ 9 ಜನರನ್ನು ವಶಕ್ಕೆ ಪಡೆದರು. ಅಲ್ಲದೆ, ಕೋಟ್ಯಂತರ ಮೌಲ್ಯದ ನಕಲಿ ಎಂ ಗೋಲ್ಡ್ ಸೈನೆಟೆಡ್ ಟುಬ್ಯಾಕೋ ಮತ್ತು ಆರ್.ಎಂ.ಡಿ ಪಾನ್ ಮಸಲಾ ಸಾಚೆಗಳು, ಇವುಗಳನ್ನು ತಯಾರಿಸಲು ಬಳಸುತ್ತಿದ್ದ ಮೂರು ಪ್ರಿಂಟೇಡ್ ಮತ್ತು ಕಟಿಂಗ್ ಮಷೀನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಆರ್.ಎಂ.ಡಿ ತಂಬಾಕು ಉತ್ಪನ್ನವನ್ನು ನಕಲಿಯಾಗಿ ತಯಾರಿಸಿ ಕಂಪನಿಗೆ ಮತ್ತು ಸರ್ಕಾರಕ್ಕೆ ಅಪಾರ ನಷ್ಟಮಾಡುತ್ತಿದ್ದರೆಂದು ಹೇಳಲಾಗಿದೆ. ತನಿಖೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಜಮಖಂಡಿ ಡಿವೈಎಸ್ಪಿ ಬಹುಮಾನ ಘೋಷಿಸಿದ್ದಾರೆ.