ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 112 ಮಂದಿ ಕೆಪಿಸಿಸಿ ಕಾರ್ಯದರ್ಶಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 112 ಮಂದಿ ಕೆಪಿಸಿಸಿ ಕಾರ್ಯದರ್ಶಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಮಾದರಿಯನ್ನು ಅನುಕರಿಸಿ ಅರ್ಹರಿಂದ ಅರ್ಜಿ ಆಹ್ವಾನಿಸಿ ಸಂದರ್ಶನ ನಡೆಸಿ 112 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯದರ್ಶಿಗಳು ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸಂಘಟನಾ ಕೆಲಸ ಮಾಡಬೇಕು. ಇವರ ಜತೆಗೆ 112 ಸಂಯೋಜಕರನ್ನೂ ನೇಮಕ ಮಾಡಲಾಗುತ್ತದೆ ಎಂದರು.
ಜಿಲ್ಲಾ ಮಟ್ಟದಲ್ಲಿಯೂ ವಿವಿಧ ಮುಖಂಡರನ್ನು ನೇಮಕ ಮಾಡುವ ಉದ್ದೇಶದಿಂದ ಸಂದರ್ಶನ ಪ್ರಕ್ರಿಯೆ ಮುಂದುವರಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪಟ್ಟಿ ಶೀಘ್ರ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅರ್ಜಿಗಳ ಸಂಖ್ಯೆ ಗಮನಿಸಿದರೆ ಕಾರ್ಯಕರ್ತರಲ್ಲಿ ಸಂಘಟನಾ ಕೆಲಸಕ್ಕೆ ಅಪಾರ ಉತ್ಸಾಹ ಇರುವುದು ಸ್ಪಷ್ಟವಾಗಿದೆ. ರಾಜಕೀಯ ಪಕ್ಷದ ಸಂಘಟನೆಗೆ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಈ ಬಾರಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಎಐಸಿಸಿಯು ದೇಶಾದ್ಯಂತ 800 ಮಂದಿಯನ್ನು ಆಹ್ವಾನಿಸಿ, ಕಾರ್ಯದರ್ಶಿ ಹುದ್ದೆಗಳಿಗೆ ಸಂದರ್ಶನ ನಡೆಸಿ ಈಗಾಗಲೇ ಪಟ್ಟಿ ಸಿದ್ಧಪಡಿಸಿದೆ. ಇದೇ ಮಾದರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲ ಅರ್ಜಿದಾರರನ್ನು ಸಂದರ್ಶನ ಮಾಡುವ ಜವಾಬ್ದಾರಿಯನ್ನು ಉಪಮುಖ್ಯಮಂತ್ರಿ ನೇತೃತ್ವದ ಹಿರಿಯ ನಾಯಕರ ಸಮಿತಿಗೆ ವಹಿಸಲಾಗಿತ್ತು ಎಂದರು.
ಕಲಬುರಗಿ ವಿಭಾಗದ ಸಂದರ್ಶನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಒಟ್ಟು ಸುಮಾರು 111 ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿದಾರರ ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ‘ಕಾರ್ಯದರ್ಶಿ ಆಗುವವರು ಕನಿಷ್ಠ 5 ವರ್ಷವಾದರೂ ಪಕ್ಷದ ಸದಸ್ಯತ್ವ ಪೂರ್ಣಗೊಳಿಸಿರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಚೇರಿಯಲ್ಲಿ ಆಯ್ಕೆ ಮಾಡುವ ಬದಲು ಜನರ ನಡುವೆ ಇರುವವರನ್ನು ನಾವು ಆಯ್ಕೆ ಮಾಡುತ್ತಿದ್ದೇವೆ. 2029ರ ಚುನಾವಣೆ ತನಕ ಇವರು ಕೆಲಸ ಮಾಡಬೇಕಾಗುತ್ತದೆ. ಈ ವೇಳೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಮಹಿಳೆಯರ ಪ್ರಾತಿನಿಧ್ಯವನ್ನೂ ಗಮನಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.