ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಬಂದಾಗ ಅವರ ಸಂಕಷ್ಟವನ್ನು ಆಲಿಸಿ ಸೂಕ್ತವಾಗಿ ಸ್ಪಂದಿಸಿ ನಿಗದಿತ ಅವಧಿಯಲ್ಲಿ ಕೆಲಸಗಳನ್ನು ಮಾಡಿಕೊಡಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಮಾಲ್ತೇಶ್ ಸೂಚನೆ ನೀಡಿದರು.ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಕುಂದು-ಕೊರತೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಯಾನುಸಾರ ಕೆಲಸ ಮಾಡಬೇಕು ಅದು ಸಾಧ್ಯವಾಗದಿದ್ದರೆ ಸೂಕ್ತವಾದ ಹಿಂಬರಹ ನೀಡಿ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಕೆಲವು ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರ ನಿಗಧಿ ಪಡಿಸಿರುವ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಇದು ಪುನರಾವರ್ತನೆಯಾದರೆ ನಾವು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕೆ.ಆರ್. ನಗರ ಪಟ್ಟಣದ ಪುರಸಭೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್ಪಿ ಇತರ ಇಲಾಖೆಗಳಿಗೆ ಹೋಲಿಕೆ ಮಾಡಿದರೆ ಪುರಸಭೆಯ ಬಗ್ಗೆಯೇ ಹೆಚ್ಚು ದೂರುಗಳು ಕೇಳಿ ಬರುತ್ತಿದ್ದು, ಮುಖ್ಯಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಗಮನ ಹರಿಸಿ ಮುಂದೆ ನಾಗರೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು.
ಕುಂದು-ಕೊರತೆ ಸ್ವೀಕಾರ ಕಾರ್ಯಕ್ರಮದ ಸಭೆಗೆ ಕೆಲವು ಅಧಿಕಾರಿಗಳು ವಿಳಂಭವಾಗಿ ಆಗಮಿಸಿದ್ದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ ಅವರು ನಾವುಗಳು ಬಂದರೂ ಕೆಲವರು ವಿಳಂಭವಾಗಿ ಬರುತ್ತೀರಾ ಹಾಗಾದರೆ ದಿನನಿತ್ಯ ನೀವು ಕಛೇರಿಗಳಿಗೆ ಹೇಗೆ ಹೋಗುತ್ತೀರಾ ಎಂಬುವುದು ಇದರಿಂದ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಚಾಳಿಯನ್ನು ಬಿಡದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದರು.ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿದ್ದು, ತಾಲೂಕು ಆರೋಗ್ಯಾಧಿಕಾರಿ ಮತ್ತು ಸಿಡಿಪಿಒ ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ತೆಗೆದುಕೊಂಡು ತಮ್ಮ ಕಚೇರಿಯ ಸಿಬ್ಬಂದಿಯ ಬಳಕೆ ಮಾಡಿಕೊಂಡು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕೆಂದು ಸಲಹೆ ನೀಡಿದರು.
ದೂರು ಸ್ವೀಕಾರ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಪಟ್ಟಿ ಮಾಡಿ ಅಂತಹವರ ಹೆಸರುಗಳನ್ನು ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಗೆ ಕಳುಹಿಸಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಎ. ರವಿಕುಮಾರ್ ಅವರಿಗೆ ಸೂಚನೆ ನೀಡಿದ ಅವರು, ಈ ವಿಚಾರದಲ್ಲಿ ಯಾರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ತಪ್ಪು ಮಾಡಿ ಕರ್ತವ್ಯ ಲೋಪವೆಸಗಿರುವವರು ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಪುರಸಭೆ ಮಾಜಿ ಸದಸ್ಯ ಕೆ.ಎಸ್. ಉಮಾಶಂಕರ್ ಲೋಕಾಯುಕ್ತರಿಗೆ ದೂರು ನೀಡಿ ಪುರಸಭೆಯ ಕಂದಾಯಾಧಿಕಾರಿ ರಘು ಎಂಬುವವರು ಸಾರ್ವಜನಿಕರು ಆನ್ ಲೈನ್ ಖಾತೆ ಮಾಡಿಸಿಕೊಳ್ಳಲು ದಾಖಲೆ ನೀಡಿದರೂ ತಿಂಗಳು ಗಟ್ಟಲೆ ಅಲೆಸುತ್ತಿದ್ದು, ಇದರ ಜತೆಗೆ ಕಚೇರಿಗೆ ಸರಿಯಾಗಿ ಬರುವುದಿಲ್ಲ ಎಂದು ದೂರಿದಾಗ ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿ ಈ ಬಗ್ಗೆ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.
ಬುಧವಾರ ನಡೆದ ದೂರು ಸ್ವೀಕಾರ ಸಭೆಯಲ್ಲಿ ಒಟ್ಟು 19 ದೂರುಗಳು ದಾಖಲಾಗಿದ್ದು, ಆ ಪೈಕಿ ಪುರಸಭೆಗೆ ಸಂಬಂಧಿಸಿದಂತೆ 11, ತಾಲೂಕು ಕಚೇರಿಗೆ ಸಂಬಂಧಿತ 6, ಲೋಕೋಪಯೋಗಿ ಇಲಾಖೆಯ ವಿರುದ್ದ 1 ಮತ್ತು ಆರ್ಡಿಪಿಆರ್ ಇಲಾಖೆಗೆ 1 ದೂರು ಬಂದವು.ಸಭೆಯ ನಂತರ ಮಾಹಿತಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಕಳೆದ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿ 16 ದೂರುಗಳು ದಾಖಲಾಗಿದ್ದು, ಅವುಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದ್ದು ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಕಚೇರಿಗೂ ಬಂದು ಅಗತ್ಯ ದಾಖಲೆಗಳೊಂದಿಗೆ ದೂರು ನೀಡಬಹುದು ಎಂದು ಮಾಹಿತಿ ನೀಡಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ, ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಶಿರಸ್ತೇದಾರ್ ಅಸ್ಲಂಭಾಷ, ಪುರಸಭೆ ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ಬಿಇಒ ಆರ್. ಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಲ್. ವಿನುತ್, ಅರ್ಕೇಶ್ವರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಸಿಡಿಪಿಒ ಸಿ.ಎಂ. ಅಣ್ಣಯ್ಯ, ಸಹಾಯಕ ಪಶು ನಿರ್ದೇಶಕ ಡಾ. ಮಂಜುನಾಥ್, ವಲಯ ಅರಣ್ಯಾಧಿಕಾರಿಗಳಾದ ಟಿ.ವಿ. ಹರಿಪ್ರಸಾದ್, ರಶ್ಮಿ, ಅಧಿಕಾರಿಗಳು ಹಾಗೂ ಲೋಕಾಯುಕ್ತ ಇಲಾಖೆಯ ಸಿಬ್ಬಂದಿಗಳು ಇದ್ದರು.-------------