ಸಮಾಜದಲ್ಲಿ ಬಿಜೆಪಿಯಿಂದ ಅಸಹಿಷ್ಣುತೆ

KannadaprabhaNewsNetwork | Published : May 1, 2024 1:18 AM

ಸಾರಾಂಶ

ಸಹಿಷ್ಣುತೆ, ಸಮಗ್ರತೆ, ಸಹಬಾಳ್ವೆ ಎಲ್ಲವೂ ನಮ್ಮ ಜನಗಳ ಮಧ್ಯೆ ಇದ್ದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಆದರೆ, ಬಿಜೆಪಿ ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸುತ್ತಿದೆ.

ಧಾರವಾಡ:

ಒಡೆದು ಆಳುವ ಪಕ್ಷ ನಮ್ಮದಲ್ಲ. ಎಲ್ಲರೊಂದಿಗೂ ಬೆರೆತು ಬಾಳುವ ಪಕ್ಷ ಕಾಂಗ್ರೆಸ್. ನಾವೆಲ್ಲ ಒಂದೇ ಕುಟುಂಬದ ಮಕ್ಕಳು ಎಂಬುದು ಪಕ್ಷದ ಸಿದ್ಧಾಂತ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪರ ಸಮೀಪದ ನಿಗದಿ ಗ್ರಾಮದಲ್ಲಿ ಮಂಗಳವಾರ ನಡೆದ ರೋಡ್‌ ಶೋ ಹಾಗೂ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಹಿಷ್ಣುತೆ, ಸಮಗ್ರತೆ, ಸಹಬಾಳ್ವೆ ಎಲ್ಲವೂ ನಮ್ಮ ಜನಗಳ ಮಧ್ಯೆ ಇದ್ದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಆದರೆ, ಬಿಜೆಪಿ ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸಿಗೆ ಮತ ಹಾಕುವ ಮೂಲಕ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. 6 ದಿನಗಳಲ್ಲಿ ಮತದಾನವಿದ್ದು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ತಮಗೆ ಐತಿಹಾಸಿಕ ಗೆಲವು ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಮುಖಂಡರಾದ ಸುರೇಶಗೌಡ ಕರಿಗೌಡ್ರ, ಮಲ್ಲನಗೌಡ ಪಾಟೀಲ, ಮೆಹರೋಜ್ ಖಾನ್, ಅಲಿ ಗೊರವನಕೊಳ್ಳ, ಅಶೋಕ ದೌಡಳ್ಳಿ, ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.

ಮುರುಘಾಮಠ:

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ನಗರದ ವಾರ್ಡ್ 7ರ ಮಣಿಕಂಠ ನಗರ, ವಾರ್ಡ್ 6ರ ಮುರುಘಾಮಠ (ಡಿಪೋ ಸರ್ಕಲ್) ಹಾಗೂ ವಾರ್ಡ್ 2ರ ಮಾಳಾಪೂರದಲ್ಲಿ ಮಂಗಳವಾರ ವಿನೋದ ಅಸೂಟಿ ರೋಡ್‌ ಶೋ ನಡೆಸಿ ಮತಯಾಚಿಸಿದರು. ಮತಪತ್ರ ಹಾಗೂ ಗ್ಯಾರಂಟಿ ಕಾರ್ಡ್‌ ವಿತರಿಸಿ ಪ್ರಮುಖ ಬೀದಿಗಳಲ್ಲಿ ಮತಯಾಚಿಸಿ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದರು. ಅಭಿವೃದ್ಧಿ ಬಗ್ಗೆ ಬಾಯಿಬಿಚ್ಚದ, ಕೋಮುವಾದವನ್ನೇ ಉಸಿರಾಗಿಸಿಕೊಂಡಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ತಿಳಿಸಿದರು. ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡರ, ನಗರಸಭೆ ಸದಸ್ಯರಾದ ಮೈನುದ್ದೀನ ನದಾಫ್, ಹಳಿಯಾಳ ಮೇಸ್ತ್ರಿ, ಫಯಾಜ್ ಬಸ್ತವಾಡ, ಹನೀಫ್ ಮಾರವಡಗಿ, ಗೌಸ್ ಮೋದಿನ ಹಂಚಿನಮನಿ, ಕರೀಂ ಸಾಬ್ ಶೇಖ್ ಇದ್ದರು.

ಹೊನ್ನಾಪೂರ:

ಕಲಘಟಗಿ ಮತಕ್ಷೇತ್ರದ ಹೊನ್ನಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ವಿನೋದ ಅಸೂಟಿ ಸಚಿವ ಸಂತೋಷ ಲಾಡ್‌ ನೇತೃತ್ವದಲ್ಲಿ ಮತಯಾಚಿಸಿದರು. ನಿರುದ್ಯೋಗ, ಬೆಲೆ ಏರಿಕೆ, ರಸಗೊಬ್ಬರ ಹಾಗೂ ಜನರ ದಿನನಿತ್ಯದ ಎಲ್ಲ ದಿನಸಿಗಳ ಬೆಲೆ ಹೆಚ್ಚಿಸಿದ್ದೆ ಬಿಜೆಪಿ ಸರ್ಕಾರದ ಅತಿದೊಡ್ಡ ಸಾಧನೆ. ಆದಕಾರಣ ಈ ಬಾರಿ ಜನರ ಸಂಕಷ್ಟ ಪರಿಹರಿಸುವ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸೇಂಟ್ ಪೀಟರ್ ಚರ್ಚಗೆ ಭೇಟಿ..

ಚುನಾವಣಾ ಪ್ರಚಾರದ ಅಂಗವಾಗಿ ಗದಗ ರಸ್ತೆಯಲ್ಲಿರುವ ಸೇಂಟ್ ಪೀಟರ್ ಚರ್ಚ್‌ಗೆ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಭೇಟಿ ನೀಡಿ ಫಾದರಗಳಾದ ಫಾಸ್ಟರ್ ನಿಕೋಲಸ್, ಫಾಸ್ಟರ್ ಜೇಮ್ಸ್ ತಲಪಾಟಿ, ಫಾಸ್ಟರ್ ಓಬುಲ್ ರಾವ್ ಆಶೀರ್ವಾದ ಪಡೆದರು. ಅಲ್ಪಸಂಖ್ಯಾತರ ಬಗ್ಗೆ ದ್ವೇಷದ ರಾಜಕೀಯ ಮಾಡುವ ಚಾಳಿ ಬಿಜೆಪಿಯಲ್ಲಿದೆ. ಸರ್ವಧರ್ಮದ ಒಳಿತಿಗಾಗಿ, ಎಲ್ಲ ಧರ್ಮಗಳ ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದರು. ಶಾಸಕರಾದ ಸಲೀಂ ಅಹಮದ್, ಪ್ರಸಾದ ಅಬ್ಬಯ್ಯ, ಮೊಹಮ್ಮದ್ ಹ್ಯಾರಿಸ್ ನಲಪಾಡ್, ಸದಾನಂದ ಡಂಗನವರ, ಅಬ್ದುಲ್ ಗಣಿ, ಕ್ರೈಸ್ತ ಧರ್ಮದ ಹಿರಿಯ ಮುಖಂಡರು, ಅನುಯಾಯಿಗಳು ಇದ್ದರು.

Share this article