ಉಡುಪಿ: ಇಂದು ಇಂಟರ್‌ನೆಟ್‌ನಲ್ಲಿ ಮುಳುಗಿರುವ ಯುವಜನರನ್ನು ನಾಟಕದತ್ತ ಸೆಳೆಯುವುದು ಸುಲಭವಲ್ಲ. ಇದು ಉತ್ತಮ ನಾಟಕಗಳಿಂದ ಮಾತ್ರ ಸಾಧ್ಯ. ಆದರೆ ಈ ಉತ್ತಮ ನಾಟಕಗಳು ಸದಭಿರುಚಿಯ ಪ್ರೇಕ್ಷಕರಿಂದ ಮಾತ್ರ ಯಶಸ್ವಿಯಾಗ ಬಲ್ಲವು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಕಲಾವಿದ ಜಯರಾಮ ಮಣಿಪಾಲ ಅವರು ತಮ್ಮ ತಂದೆತಾಯಿ ಹೆಸರಲ್ಲಿ ಗುರುವಸಂತಿ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿ ನಾಟಕೋತ್ಸವವನ್ನು ಆಯೋಜಿಸಿ ಸಮಾಜಕ್ಕೆ ತಂದೆ ತಾಯಿಯ ಮಹತ್ವವನ್ನು ಸಾರುತ್ತಿರುವುದು ಅಭಿನಂದನೀಯ ಎಂದರು.
ತಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದಾಗ ಶಾಲೆಗಳಲ್ಲಿ ಯಕ್ಷ ಶಿಕ್ಷಣ ಆರಂಭಿಸಿದ್ದು, ಇಂದು 3,500ಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ರಂಗಭೂಮಿ ಉಡುಪಿ ವತಿಯಿಂದ 2 ವರ್ಷಗಳಿಂದ ರಂಗಶಿಕ್ಷಣವನ್ನು ನೀಡಲಾಗುತ್ತಿದ್ದು, 12 ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ನಡೆದಿದೆ. ಮುಂದೆ ಜಾನಪದವನ್ನು ಕೂಡ ಶಾಲೆಗಳಲ್ಲಿ ಪ್ರಾರಂಭಿಸುವ ಆಶಯ ಇದೆ ಎಂದರು.ಉದ್ಯಮಿ ರಾಮಮೂರ್ತಿ ಭಟ್, ರೋಟೇರಿಯನ್ ಬಿ. ರಾಜಾರಾಮ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ವಿಠಲ ಶೆಟ್ಟಿಗಾರ್ ಸಗ್ರಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಕಾರ್‍ಯಕ್ರಮದ ರೂವಾರಿ ಜಯರಾಮ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದ ಸುಂದರ ನಂದ್ಯಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್‍ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಕರ ಮಣಿಪಾಲ್ ರಚಿಸಿ, ನಟಿಸಿ, ನಿರ್ದೇಶಿಸಿರುವ ‘ಅರ್ಬುದಾ - ಪುಣ್ಯಕೋಟಿ’ ಜಾನಪದ ನಾಟಕದ ಪ್ರದರ್ಶನ ನಡೆಯಿತು.