ದಾವಿವಿ ಹುದ್ದೆಗಳ ನೇಮಕದಲ್ಲಿ ಭ್ರಷ್ಟಾಚಾರ ತನಿಖೆ ನಡೆಸಿ

KannadaprabhaNewsNetwork |  
Published : Jul 18, 2025, 12:45 AM IST
17ಕೆಡಿವಿಜಿ1-ದಾವಣಗೆರೆಯಲ್ಲಿ ಗುರುವಾರ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ 2023ರ ನೇರ ನೇಮಕಾತಿಯಡಿ ಬೋಧಕರ ಹುದ್ದೆಗಳು ಹಾಗೂ 10 ಬೋಧಕೇತರ ಹುದ್ದೆಗಳ ಭರ್ತಿಯಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆ ಇ.ಡಿ. ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಒತ್ತಾಯಿಸಿದ್ದಾರೆ.

- 2023ರ ನೇರ ನೇಮಕಾತಿಯಡಿ ಬೋಧಕರು, ಬೋಧಕೇತರ ಹುದ್ದೆಗಳ ಭರ್ತಿಯಲ್ಲಿ ಅವ್ಯವಹಾರ: ದಸಂಸ

- ಹೊರಗುತ್ತಿಗೆಯ ಒಂದೇ ಏಜೆನ್ಸಿಗೆ ಪದೇಪದೇ ಟೆಂಡರ್‌ ಬಗ್ಗೆಯೂ ತನಿಖೆಯಾಗಲಿ: ಕುಂದುವಾಡ ಮಂಜುನಾಥ

- - -

* (ಮುಖ್ಯಾಂಶಗಳು)

- ದಾವಿವಿಯಲ್ಲಿ ಬೋಧಕೇತರ ಹುದ್ದೆ ಪರೀಕ್ಷೆಗಳು ಅನೇಕ ಸಲ ಮುಂದೂಡಿಕೆ.

- ಬೋಧಕೇತರ ಹುದ್ದೆ ನೇಮಕಾತಿ ಆದೇಶ ಪ್ರತಿಗಳಿಗೆ ಕುಲ ಸಚಿವರು ಸಹಿ ಮಾಡಿಲ್ಲ.

- ರಾಜಕೀಯ, ಸಾಮಾಜಿಕವಾಗಿ ಪ್ರಬಲವಿರುವ ಪ್ರಭಾವಿಗಳ ಸಂಬಂಧಿಕರೇ ಆಯ್ಕೆ.

- ಅನೇಕ ಬ್ಯಾಂಕ್‌ಗಳಲ್ಲಿ ಒಂದೇ ಅವಧಿಯಲ್ಲೇ ಲೋನ್‌ಗಳ ಪಡೆದಿರುವ ಬೋಧಕ ಸಿಬ್ಬಂದಿ.

- ಬೋಧಕರ ಹುದ್ದೆಗಳ ನೇಮಕಕ್ಕೆ ₹30ರಿಂದ ₹50 ಲಕ್ಷ ಲಂಚ ನೀಡಿರುವುದಾಗಿ ಆರೋಪಗಳಿವೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ 2023ರ ನೇರ ನೇಮಕಾತಿಯಡಿ ಬೋಧಕರ ಹುದ್ದೆಗಳು ಹಾಗೂ 10 ಬೋಧಕೇತರ ಹುದ್ದೆಗಳ ಭರ್ತಿಯಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆ ಇ.ಡಿ. ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ವಿವಿಯಲ್ಲಿ ಬೋಧಕೇತರ ಹುದ್ದೆಗೆ ಏರ್ಪಡಿಸಿದ್ದ ಪರೀಕ್ಷೆ ಅನೇಕ ಸಲ ಮುಂದೂಡಲ್ಪಟ್ಟಿದೆ. ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಾಕಷ್ಟು ಸಲ ಕೋರಿದ್ದರೂ ಇದುವರೆಗೂ ನೀಡಿಲ್ಲ. ಅಲ್ಲದೇ, 10 ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಿದರು.

ಬೋಧಕೇತರ ಹುದ್ದೆ ನೇಮಕಾತಿ ಆದೇಶ ಪ್ರತಿಗಳಿಗೆ ಆಡಳಿತ ವಿಭಾಗದ ಕುಲ ಸಚಿವರು ಸಹಿ ಮಾಡಿಲ್ಲ. ಆದರೆ, ಕುಲ ಸಚಿವರು 2 ದಿನ ರಜೆ ಹೋಗಿದ್ದ ಸಂದರ್ಭ ಪ್ರಭಾರ ಕುಲ ಸಚಿವರು ನೇಮಕಾತಿ ಆದೇಶ ಪತ್ರಕ್ಕೆ ಸಹಿ ಮಾಡಿದ್ದಾರೆ. ಇದು ತಮ್ಮ ಆರೋಪವನ್ನು ಪುಷ್ಠೀಕರಿಸುತ್ತದೆ. 2023ರ ಜೂನ್‌ 17ರ ಸಿಂಡಿಕೇಟ್‌ ಸಭೆಯ ನಡವಳಿಗಳನ್ನು ಸಹ ದಾವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ. ನೇಮಕವಾದವರ ಪೈಕಿ ಅನೇಕರ ಆಯ್ಕೆ ಪ್ರಕ್ರಿಯೆ ನಿಯಮ ಬಾಹಿರವಾಗಿದೆ. ಪ್ರಭಾವಿ ಸಂಘಟನೆ, ಅಂಗ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು, ರಾಜಕೀಯ, ಸಾಮಾಜಿಕವಾಗಿ ಪ್ರಬಲವಿರುವ ಪ್ರಭಾವಿಗಳ ಸಂಬಂಧಿಕರೇ ಆಯ್ಕೆ ಆಗಿರುವುದು ಮತ್ತಷ್ಟು ಅನುಮಾನ ಹುಟ್ಟುಹಾಕುತ್ತದೆ. ರಾಜ್ಯ ಸರ್ಕಾರದ 2017ರ ಜುಲೈ 7ರ ಮಾರ್ಗಸೂಚಿಯಂತೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ, ವೀಡಿಯೋ ಮಾಡುವ ಮೂಲಕ ಸಂದರ್ಶನ ನಡೆಸಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕು. ಆದರೆ, ಅದನ್ನೆಲ್ಲಾ ಗಾಳಿಗೆ ತೂರಿದ್ದಾರೆ ಎಂದರು.

ಬೋಧಕರ ಹುದ್ದೆಗೆ ನೇಮಕಕ್ಕೆ ₹30ರಿಂದ ₹50 ಲಕ್ಷ ಲಂಚ ನೀಡಿರುವ ಬಗ್ಗೆ ಅಭ್ಯರ್ಥಿಗಳೇ ಸರ್ಕಾರದ ಗಮನಕ್ಕೂ ತಂದಿದ್ದಾರೆ. ಅಭ್ಯರ್ಥಿಗಳಿಗೆ ಒಎಂಆರ್ ಶೀಟ್‌ ನೀಡಿಲ್ಲ. ಸಂಬಂಧಿಸಿದವರ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಕೂಲಂಕಶ ತನಿಖೆ ಮಾಡಬೇಕು. ಬೋಧಕ ಹುದ್ದೆ ಪರೀಕ್ಷಾ ಕೊಠಡಿಯ ವೀಡಿಯೋ ಚಿತ್ರಣದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರೂ, ಯಾವುದೇ ತನಿಖೆಯಾಗಲೀ, ಕ್ರಮವನ್ನಾಗಲೀ ಸರ್ಕಾರ ಕೈಗೊಳ್ಳಲಿಲ್ಲ. ಅಭ್ಯರ್ಥಿಗಳಿಗೆ ವಿವಿ ನೀಡುವ ಪೆನ್‌ಗಳನ್ನೇ ಬಳಸಿ, ಪರೀಕ್ಷೆ ಬರೆಯಲು ಹೇಳುತ್ತಾರೆ. ಬೋಧಕ ಹುದ್ದೆಯ ಪರೀಕ್ಷಾ ಕೊಠಡಿ ವೀಡಿಯೋ ಚಿತ್ರಣದಲ್ಲಿ ಇದು ಸೆರೆಯಾಗಿದೆ. ಎಲ್ಲ ಅಭ್ಯರ್ಥಿಗಳು ಒಂದೇ ರೀತಿ ಪೆನ್ ಬಳಸಿದ್ದಾರೆ ಎಂದು ವಿವರಿಸಿದರು.

ವಿ.ವಿ.ಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ವಲ್ಪ ದಿನದಲ್ಲೇ ಬ್ಯಾಂಕ್‌ನವರು ಭೇಟಿ ನೀಡಿ, ಸಾಲ ನೀಡಲು ಬಂದಿದ್ದಾರೆ. ತುಂಬಾ ಬೋಧಕ ಸಿಬ್ಬಂದಿ ಅನೇಕ ಬ್ಯಾಂಕ್‌ಗಳಲ್ಲಿ ಲೋನ್‌ಗಳನ್ನೇ ಒಂದೇ ಅವಧಿಯಲ್ಲೇ ಪಡೆದಿದ್ದಾರೆ. ಈ ಬಗ್ಗೆ ಇ.ಡಿ. ಸಮಗ್ರ ತನಿಖೆ ಮಾಡಿದರೆ, ಸತ್ಯಾಸತ್ಯತೆ ಬಯಲಾಗುತ್ತದೆ. ವಿ.ವಿ. ಆಡಳಿತ ವಿಭಾಗದ ಕುಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದವರ ಹೆಂಡತಿಯೇ ಇಲ್ಲಿ ಬೋಧಕರಾಗಿ ನೇಮಕವಾಗಿದ್ದಾರೆ. ಇದು ಸಹ ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತದೆ. ಈ ಎಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಹೊರಗುತ್ತಿಗೆ ಮಾನವ ಸಂಪನ್ಮೂಲ ಟೆಂಡರ್ ಪ್ರಕ್ರಿಯೆ ನಿರಂತರವಾಗಿ ಬಿಕೆಆರ್ ಸ್ವಾಮಿ ಸೆಕ್ಯುರಿಟಿ ಏಜೆನ್ಸಿ ಹಾಗೂ ಬಿಕೆಆರ್ ಸರ್ವೀಸ್‌ ಪ್ರೈವೇಟ್ ಲಿಮೆಂಟ್‌ಗೆ ಅನುಕೂಲಕರ ನಿಯಮಾವಳಿಗಳನ್ನೇ ಪಾಲಿಸಿ, ನೀಡುತ್ತ ಬರುತ್ತಿದ್ದಾರೆ. ಅನೇಕ ವರ್ಷದಿಂದ ಹೊರಗುತ್ತಿಗೆ ನೌಕರರಿಗೆ ಪಿಎಫ್‌, ಇಎಸ್‌ಐ ಹಣ ಪಾವತಿಸಿಲ್ಲ. ಇಎಸ್‌ಐ, ಪಿಎಫ್ ವಿಚಾರ ನ್ಯಾಯಾಲಯದಲ್ಲೂ ಇದೆ. ಪದೇಪದೇ ಒಂದೇ ಸಂಸ್ಥೆಗೆ ಟೆಂಡರ್‌ ನೀಡುತ್ತಿರುವ ಬಗ್ಗೆಯೂ ತನಿಖೆ ಮಾಡಿಸಬೇಕು ಎಂದು ಮಂಜುನಾಥ ಕುಂದುವಾಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಕಬ್ಬೂರು ಮಂಜುನಾಥ, ಸಿದ್ದನಹಳ್ಳಿ ನಾಗರಾಜ, ಜೆ.ಮಹಾಂತೇಶ, ಶಿವರಾಜ ಕುಂದುವಾಡ, ಮಂಜುನಾಥ ಇತರರು ಇದ್ದರು.

- - -

-17ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಡಿಎಸ್‌.ಎಸ್‌. ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ