ಉಳ್ಳಾಲ ; ದೈನಂದಿನ ಆಹಾರ ಪದ್ಧತಿಯಲ್ಲಿ ಆಹಾರ ವಿಜ್ಞಾನದ ಮಹತ್ವವನ್ನೂ ಅರಿತುಕೊಳ್ಳಬೇಕಿದೆ. ಮಾನವ ದೇಹದ ರೋಗನಿರೋಧಕ ವ್ಯವಸ್ಥೆಯ ಕಾರ್ಯವಿಧಾನದಲ್ಲಿ ಆಹಾರವು ವಹಿಸುವ ಪಾತ್ರವು ಅತ್ಯಂತ ಪ್ರಮುಖ ಎಂದು ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ ಮೈಸೂರಿನ ಮಾಜಿ ನಿರ್ದೇಶಕ ಪದ್ಮಶ್ರೀ ಪ್ರೊ. ವಿ. ಪ್ರಕಾಶ್ ಅವರು ಹೇಳಿದರು.
ವಿವಿ ಕುಲಸಚಿವ ಸಂತೋಷ್ ಬಿ ಜಗಲಸಾರ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪ್ರಮುಖ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗೆಗಳೊಂದಿಗೆ ತೊಡಗಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸುವುದಕ್ಕೆ ವಿಶ್ವವಿದ್ಯಾನಿಲಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಒದಗಿಸಿ ಕೊಡುತ್ತದೆ ಎಂದರು.ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ.ಮಂಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ , ತಂತ್ರಜ್ಞಾನ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇಂದಿನ ಆಧುನಿಕತೆಯಲ್ಲಿ ಎದುರಾಗುತ್ತಿರುವ ಸವಾಲುಗಳ ನಡುವೆ ಅನೇಕ ಅವಕಾಶಗಳೂ ತೆರೆದುಕೊಳ್ಳುತ್ತಿದ್ದು ಇದಕ್ಕೆ ಇಂತಹ ಸಮ್ಮೇಳನಗಳು ಪೂರಕವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಮಾಜಿ ಡೀನ್ ಪ್ರೊ. ಆನಂದ್ ಕೆ. ಕೊಂಡಪಿ ಅವರು ಟ್ರೆಂಡಿಸ್ ಫೋರಂ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಮಂಗಳೂರು ಮೀನುಗಾರಿಕೆ ಕಾಲೇಜಿನ ಮಾಜಿ ಡೀನ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವಪ್ರಕಾಶ್ ಕರಾವಳಿಯ ಮೀನುಗಾರಿಕೆ ಮತ್ತು ಪೌಷ್ಟಿಕ ಆಹಾರ ವಿಷಯದ ಕುರಿತು ಮಾತನಾಡಿದರು.ಸಮ್ಮೇಳನದ ಸಂಯೋಜಕರು ಹಾಗೂ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಎಸ್. ಮುಸ್ತಕ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ.ನರಸಿಂಹಯ್ಯವಂದಿಸಿದರು.