ಕನ್ನಡಪ್ರಭ ವಾರ್ತೆ ಭದ್ರಾವತಿ
ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಅಗತ್ಯವಿರುವ ಬಂಡವಾಳ ತೊಡಗಿಸುವ ಮೂಲಕ ಅಭಿವೃದ್ಧಿಪಡಿಸುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ನಗರದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಮಂಡಲ ಹಾಗೂ ಜಾತ್ಯತೀತ ಜನತಾದಳ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ನೂತನ ಸಂಸದರು ಮತ್ತು ಶಾಸಕರಿಗೆ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರದಲ್ಲಿ ೩ನೇ ಬಾರಿಗೆ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಚಾರವಾಗಿದ್ದು, ನೂತನ ಸಚಿವರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಕ್ಷೇತ್ರದಲ್ಲಿ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಮುಂದಾಗುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ವಿಶ್ವಾಸ ಹೊಂದಿದ್ದೇನೆ. ಕ್ಷೇತ್ರದಲ್ಲಿನ ಕಾರ್ಮಿಕರು ಹಾಗೂ ಅವರ ಕುಟುಂಬ ದವರ ಹಿತರಕ್ಷಣೆಗೆ ಬದ್ಧನಾಗಿದ್ದು, ೪ನೇ ಬಾರಿ ಸಂಸದನಾಗಿ ಆಯ್ಕೆ ಮಾಡಿರುವ ಲೋಕಸಭಾ ಕ್ಷೇತ್ರದ ಮತದಾರರಿಗೆ ಹಾಗು ಗೆಲುವಿಗೆ ಶ್ರಮಿಸಿದ ಮೈತ್ರಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಅವಧಿಯಲ್ಲೂ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.ಲೋಕಸಭಾ ಸದಸ್ಯರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ವೈ.ರಾಘವೇಂದ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ಧನಂಜಯ ಸರ್ಜಿಯವರನ್ನು ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜೆಡಿಎಸ್ ನಗರ ಅಧ್ಯಕ್ಷ ಆರ್.ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮ ಕುಮಾರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಹಾಗೂ ಅಣ್ಣಪ್ಪ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದ್ ಕುಮಾರ್, ವಿ. ಕದಿರೇಶ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಡಿ. ಆನಂದ್, ಮಂಜುನಾಥ್ ಕದಿರೇಶ್. ಮಧು ಕುಮಾರ್, ಕೆ.ಎನ್ ಶ್ರೀ ಹರ್ಷ, ಗಾಯತ್ರಿ ದೇವಿ ಮಲ್ಲಪ್ಪ, ಗೀತಾ ಸತೀಶ್, ಮಂಗಳ ನಾಗೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.