ಮಂಗಳೂರು: ಕರ್ನಾಟಕದ ಕಡಲ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಒಟ್ಟು ₹ 8,295 ಕೋಟಿ ಅಂದಾಜು ಹೂಡಿಕೆ ಸಾಮರ್ಥ್ಯದ ಎಂಟು ಕಡಲ ಯೋಜನೆಗಳ ಹೂಡಿಕೆದಾರರ ಕೈಪಿಡಿ ಹಾಗೂ ಮಾರುಕಟ್ಟೆ ಸಾಮಗ್ರಿಗಳನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಬಿಡುಗಡೆ ಮಾಡಿದೆ.
ಹೂಡಿಕೆದಾರರ ಕೈಪಿಡಿಯಲ್ಲಿ ರಾಜ್ಯದ ಕಡಲ ಯೋಜನೆಗಳ ವಿವರ, ಹೂಡಿಕೆ ಅವಕಾಶಗಳು ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒದಗಿಸಲಾಗಿದೆ. ಇದರಿಂದ ದೇಶೀಯ ಹಾಗೂ ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದ ಕಡಲ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗಲಿದೆ.
ಮುಖ್ಯಮಂತ್ರಿ ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ನಾಯಕತ್ವದಲ್ಲಿ ರಾಜ್ಯದ ಕಡಲ ಸಾಮರ್ಥ್ಯವನ್ನು ಆರ್ಥಿಕ ಅವಕಾಶಗಳಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಗಳಿಂದ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ, ಕಡಲ ಪರಿಸರ ವ್ಯವಸ್ಥೆಯ ಬಲವರ್ಧನೆ ಹಾಗೂ ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.ಸಭೆಯಲ್ಲಿ ಬಂದರುಗಳು ಮತ್ತು ಕಡಲ ಹಾಗೂ ಒಳನಾಡು ಜಲಸಾರಿಗೆ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಕ್ಯಾಪ್ಟನ್ ಸಂಜಯ್ ಟಿ. ಉಗಲ್ಮುಗಿವೆ, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್., ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸಿ. ಬಾಲಚಂದ್ರ ಮತ್ತಿತರರು ಇದ್ದರು.