ಸಿದ್ದರಾಮಯ್ಯ ವಿರುದ್ಧ ಕಾಣದ ಕೈಗಳ ಕೈವಾಡ: ಸಿಬಿಐ ತನಿಖೆಗೆ ವರ್ತೂರು ಪ್ರಕಾಶ್ ಒತ್ತಾಯ

KannadaprabhaNewsNetwork |  
Published : Oct 16, 2026, 01:15 AM IST
೧೫ಕೆಎಲ್‌ಆರ್-೫ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್. | Kannada Prabha

ಸಾರಾಂಶ

ಎಂಟು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಇಲ್ಲಸಲ್ಲದ ಕೆಲಸಗಳನ್ನು ಮಾಡಲು ಹೋಗಿಲ್ಲ. ಈಗ ಅವರ ವಿರುದ್ಧ ಬರುತ್ತಿರುವ ಆರೋಪಗಳಿಗೆ ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿರುವ ಮಹಾನಾಯಕನ ಆಟ ನಡೆದಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕಳೆದ ೨೫ ವರ್ಷಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಒಡನಾಡಿಯಾಗಿ ಬಹಳ ಹತ್ತಿರದಿಂದ ಅವರ ವ್ಯಕ್ತಿತ್ವ ನೋಡಿದ್ದೇನೆ, ಕಾಣದ ವ್ಯಕ್ತಿಗಳು ಅವರ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿಯಲು ವಿಡಿಯೋಗಳ ಮೂಲಕ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಟು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಇಲ್ಲಸಲ್ಲದ ಕೆಲಸಗಳನ್ನು ಮಾಡಲು ಹೋಗಿಲ್ಲ. ಈಗ ಅವರ ವಿರುದ್ಧ ಬರುತ್ತಿರುವ ಆರೋಪಗಳಿಗೆ ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿರುವ ಮಹಾನಾಯಕನ ಆಟ ನಡೆದಿದೆ ಎಂದರು.

ರಮೇಶ್ ಜಾರಕಿಹೊಳಿ, ರಾಜಣ್ಣರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದ್ದಾಯಿತು. ಈಗ ರಾಜಕೀಯ ನಿವೃತ್ತಿ ಜೀವನ ನಡೆಸುತ್ತಿರುವ ಸಿದ್ದರಾಮಯ್ಯರಿಗೆ ಕೊನೆಹಂತದಲ್ಲಿ ತೊಂದರೆ ಕೊಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ, ಯಾರು ಷಡ್ಯಂತ್ರ ನಡೆಸಿದ್ದಾರೆಯೋ, ಅವರು ಯಾವುದೇ ಪಕ್ಷದವರಾಗಿರಲಿ, ಕೂಡಲೇ ಬಂಧಿಸಬೇಕು. ಅಹಿಂದ ನಾಯಕನ ವಿರುದ್ಧ ನಡೆದಿರುವ ಕುತ್ರಂತ್ರದ ವಿರುದ್ಧ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯ ಮಾಡಿದರು.

ಎಸ್‌ಐಟಿ ತನಿಖೆ ಮಾತ್ರ ಬೇಡ, ಏಕೆಂದರೆ ಎಸ್‌ಐಟಿ ಅಂದರೆ ಶಿವಕುಮಾರ್ ಇನ್ವೆಸ್ಟಿಕೇಷನ್ ಟೀಂ ಆಗಿದ್ದು, ಅದರಲ್ಲಿ ನ್ಯಾಯ ದೊರಕುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ನಡೆದಿರುವ ಷಡ್ಯಂತ್ರದ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬುದನ್ನು ಪರೋಕ್ಷವಾಗಿ ವರ್ತೂರು ಪ್ರಕಾಶ್ ಹೇಳಿದರು.

ಸಿದ್ದರಾಮಯ್ಯ ಎರಡನೇ ಸಿಎಂ ಆಗಿದ್ದ ಮೂರು ವರ್ಷಗಳ ಅವಧಿಯಲ್ಲಿ ಅವರ ಹಿಂಬಾಲಕರು, ಚೇಲಾಗಳು ಮಂತ್ರಿಗಳಾಗಿ ಒಬ್ಬೊಬ್ಬರು ಐದು ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಆದರೆ ಒಬ್ಬ ಸಚಿವರೂ ಕೂಡ ಸಿದ್ದರಾಮಯ್ಯರ ಪರ ಮಾತನಾಡುತ್ತಿಲ್ಲ. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತ್ರ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಷಡ್ಯಂತ್ರದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಇಡೀ ರಾಜ್ಯದ ಅಹಿಂದ ವರ್ಗ ಬೆಂಬಲ ನೀಡಬೇಕು ಎಂದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿದ್ದರಾಮಯ್ಯ ಪರ ಅಹಿಂದ ವರ್ಗ ಹೋರಾಟ ಮಾಡಬೇಕು. ಸಿದ್ದರಾಮಯ್ಯ ಅವರಿಂದ ಲಾಭ ಮಾಡಿಕೊಂಡವರು ಯಾರು ಧ್ವನಿ ಎತ್ತುತ್ತಿಲ್ಲ, ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಹೊರಗಡೆ ಬರಬೇಕು, ಪಕ್ಷಾತೀತವಾಗಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಮುಖಂಡರಾದ ಬೆಗ್ಲಿಪ್ರಕಾಶ್, ಬಂಕ್ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಂಜನಪ್ಪ, ತಂಬಿಹಳ್ಳಿ ಮುನಿಯಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಧ್ವಾಚಾರ್ಯ ಜಯಂತಿ ಆಚರಣೆ ನಿರ್ಧಾರ ಸ್ವಾಗತಾರ್ಹ: ರಾಮಾಚಾರ್‌ ಘಂಟಿ
ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್‌ಗೆ ಮತ ನೀಡಿ: ಟಿ.ಬಿ.ಜಯಚಂದ್ರ