ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಾಲೆ ಗ್ರಾಮದ ಪ್ರಗತಿಪರ ಕೃಷಿಕ ಹಾಗೂ ಆಯುರ್ವೇದ ಸಸ್ಯಗಳ ಸಂರಕ್ಷಕರಾದ ಪ್ರಕಾಶ್‌ರಾವ್ ಮಂಚಾಲೆ ಮತ್ತು ಪತ್ನಿ ಶಾಂತಾ ಅವರನ್ನು ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನೆಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಆಯುಷ್ ಇಲಾಖೆಯು ವಿಶೇಷ ಆಹ್ವಾನ ನೀಡಿದೆ.
ತ್ಯಾಗರ್ತಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಾಲೆ ಗ್ರಾಮದ ಪ್ರಗತಿಪರ ಕೃಷಿಕ ಹಾಗೂ ಆಯುರ್ವೇದ ಸಸ್ಯಗಳ ಸಂರಕ್ಷಕರಾದ ಪ್ರಕಾಶ್‌ರಾವ್ ಮಂಚಾಲೆ ಮತ್ತು ಪತ್ನಿ ಶಾಂತಾ ಅವರನ್ನು ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನೆಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಆಯುಷ್ ಇಲಾಖೆಯು ವಿಶೇಷ ಆಹ್ವಾನ ನೀಡಿದೆ.
ಮಂಚಾಲೆ ಗ್ರಾಮದಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಹನಿನಿರಾವರಿ ಮೂಲಕ ಕಾಳುಮೆಣಸು, ಮಧುನಾಶಿನಿ, ಕ್ಯಾನ್ಸರ್ ರೋಗಕ್ಕೆ ಮದ್ದಾದ ನ್ಯಾಪಿಯ, ಮಧುಮೇಹ ಉಪಯೋಗಕಾರಕ ವಿನಾಯಕ ಬಳ್ಳಿ, ಅರಿಶಿನ, ದಾಲ್ಚೀನಿ, ಲಿಂಬೆ ಸೇರಿದಂತೆ ವಿವಿಧ ಗಿಡಮೂಲಿಕೆ ಸಸ್ಯಗಳನ್ನು ಬೆಳೆದು ಮಾದರಿ ಕೃಷಿಕ ಎಂದು ಕರೆಸಿಕೊಂಡಿದ್ದಾರೆ. ಪ್ರಕಾಶ್‍ರಾವ್‍ರವರ ಪ್ರಗತಿಪರ ಬಹುಮುಖಿ ಕೃಷಿಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದು ಇವರ ಆಯುರ್ವೇದ ಕೃಷಿಯನ್ನು ಕೆಲವು ವಿವಿಗಳ ವಿದ್ಯಾರ್ಥಿಗಳು ಸಂಶೋಧನಾ ಕೃತಿಯನ್ನಾಗಿ ಮಂಡಿಸಿದ್ದಾರೆ. ಅಲ್ಲದೇ ಇವರಿಗೆ ಉತ್ತಮ ಕೃಷಿಕ ಎಂಬ ರಾಷ್ಟ್ರಮಟ್ಟದ ಪ್ರಶಸ್ತಿಯೂ ಈ ಹಿಂದೆ ಲಭಿಸಿದೆ. ಇವರ ಸಾಧನೆಯನ್ನು ಗುರುತಿಸಿದ ಭಾರತೀಯ ಆಯುಷ್ ಇಲಾಖೆಯು ಇವರ ಜೊತೆಗೂಡಿ ಗಿಡಮೂಲಿಕೆ ಸಸ್ಯ ಬೆಳೆಯುವಿಕೆಯಲ್ಲಿ ಕೈಜೋಡಿಸಿದೆ. ಕರ್ನಾಟಕದಿಂದ ವಿಶೇಷ ಅಥಿತಿಯಾಗಿ ಪ್ರಕಾಶ್‍ರಾವ್ ಮಂಚಾಲೆ ಹಾಗೂ ಪತ್ನಿ ಶಾಂತಾ ಅವರನ್ನು ಭಾರತೀಯ ಆಯುಷ್ ಇಲಾಖೆಯು ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನೆಡೆಯುವ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.
ಭಾರತ ಸರ್ಕಾರದ ಆಯುಷ್ ಇಲಾಖೆ ನನ್ನ ಆಸಕ್ತಿಯನ್ನು ಗುರುತಿಸಿ ಆಗಸ್ಟ್ 15ರಂದು ದೆಹಲಿಯಲ್ಲಿ ನೆಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿರುವುದು ಸಂತಸ ತಂದಿದ್ದು, ಅವಕಾಶ ನೀಡಿದ ಇಲಾಖೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ.
- ಪ್ರಕಾಶ್‍ರಾವ್ ಮಂಚಾಲೆ, ಪ್ರಗತಿಪರ ಕೃಷಿಕ
ನನ್ನ ಪತಿ ಪ್ರಗತಿಪರ ಕೃಷಿಕರಾಗಿ ಪಶ್ಚಿಮಘಟ್ಟ ಶ್ರೇಣಿಯಲ್ಲಿನ ಆಯುರ್ವೇದ ಗಿಡಗಳನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಸಾಧನೆಯನ್ನು ಭಾರತ ಸರ್ಕಾರ ಗುರುತಿಸಿ ಅವರೊಂದಿಗೆ ನನಗೂ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿರುವುದು ಸಂತಸ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.