ಅಯೋಡಿನ್ ಮನುಷ್ಯನ ಬೆಳವಣಿಗೆಗೆ ಅತ್ಯಗತ್ಯ: ಎಸ್.ಡಿ.ಬೆನ್ನೂರ

KannadaprabhaNewsNetwork |  
Published : Oct 26, 2024, 12:49 AM ISTUpdated : Oct 26, 2024, 12:50 AM IST
25ಕೆಎಂಎನ್ ಡಿ34 | Kannada Prabha

ಸಾರಾಂಶ

ಉಪ್ಪು ಮಾನವನ ಜೀವನದಲ್ಲಿ ಅಮೂಲ್ಯವಾದ ನೈಸರ್ಗಿಕ ಪೋಷಕಾಂಶ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಕತನ, ಮೆಳ್ಳೆಗಣ್ಣು, ಕುಬ್ಜತನ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಯೋಡಿನ್ ನಿಸರ್ಗದತ್ತವಾಗಿ ದೊರೆಯುವ ಒಂದು ಸೂಕ್ಷ್ಮ ಪೋಷಕಾಂಶ. ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.

ತಾಲೂಕಿನ ಮಹದೇವಪುರ ಗ್ರಾಮದ ಗ್ರಾಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಜಂಟಿಯಾಗಿ ಗ್ರಾಮ ಆರೋಗ್ಯ ಪಡೆಗಾಗಿ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪ್ಪು ಮಾನವನ ಜೀವನದಲ್ಲಿ ಅಮೂಲ್ಯವಾದ ನೈಸರ್ಗಿಕ ಪೋಷಕಾಂಶ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಕತನ, ಮೆಳ್ಳೆಗಣ್ಣು, ಕುಬ್ಜತನ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ ಎಂದರು.

ವಯಸ್ಕರಲ್ಲಿ ಗಳಗಂಡ, ಗೊಗ್ಗರು ದ್ವನಿ, ದೇಹದಲ್ಲಿ ಬಾವು, ಸ್ಥೂಲಕಾಯ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಉಪ್ಪನ್ನೆ ಬಳಸಿರಿ ಮತ್ತು ಅದರ ಕೊರತೆಯಿಂದಾಗುವ ನ್ಯೂನತೆಗಳನ್ನು ತಡೆಗಟ್ಟಿರಿ ಎಂದು ಸಲಹೆ ನೀಡಿದರು.

ನಂತರ ವೈದ್ಯಾಧಿಕಾರಿ ಪಿ.ರಮ್ಯಾ ಮಾತನಾಡಿ, ಗರ್ಭಿಣಿಯರಾದಾಗ ಅಯೋಡಿನ್ ಕೊರತೆ ತೀವ್ರವಾಗಿದ್ದರೆ ಹುಟ್ಟುವ ಮಗುವಿನಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ, ಪದೇ ಪದೆ ಗರ್ಭ ಪಾತ, ನಿರ್ಜೀವ ಶಿಶುವಿನ ಜನನ ಆಗುತ್ತವೆ. ಹಾಗೆಯೇ ಖರೀದಿಸಿದ ಅಯೋಡಿನ್ ಉಪ್ಪನ್ನು ಗಾಳಿ ಬೆಳಕಿಗೆ ತೆರೆದಿಡದೆ ಸುರಕ್ಷಿತವಾಗಿ ರಕ್ಷಿಸಿ ಇಡಬೇಕು ಎಂದರು.

ದಿನನಿತ್ಯ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪಿನ ಬಳಕೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವದು ಹಾಗೂ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳನ್ನು ತಡೆಗಟ್ಟಲು ಪ್ರತಿ ವರ್ಷ ಅಕ್ಟೋಬರ್ 21 ರಿಂದ 27 ರವರೆಗೆ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ಈ ವೇಳೆ ಕ್ಷಯ ರೋಗ, ಮಾನಸಿಕ ಆರೋಗ್ಯ, ಸಾಂಕ್ರಮಿಕ ವಲ್ಲದ ರೋಗಗಳು, ಮುಟ್ಟಿನ ನೈರ್ಮಲ್ಯ, ಬಾಲ್ಯ ವಿವಾಹ, ಭ್ರೂಣ ಹತ್ಯೆ ತಡೆಗಟ್ಟುವ ಕುರಿತು, ಪೌಷ್ಟಿಕತೆ ಕುರಿತು ತರಬೇತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಐಸಿಡಿಎಸ್ ಮೇಲ್ವಿಚಾರಕಿ ಆಶಾ, ಗ್ರಾ ಪಂ ಕಾರ್ಯದರ್ಶಿ ಕೃಷ್ಣಪ್ಪ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಾ ರಾಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಫಾತಿಮಾ, ಶಶಿಕಲಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ