ಹಳ್ಳಿ ಗಲ್ಲಿಗಳಲ್ಲೂ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಭೂತ!

KannadaprabhaNewsNetwork |  
Published : Apr 10, 2025, 01:01 AM IST
ಎಐ ಚಿತ್ರ | Kannada Prabha

ಸಾರಾಂಶ

ಒಮ್ಮೆ ಹಣ ಗೆದ್ದವರು ಹಲವು ಸಲ ಕಳೆದುಕೊಳ್ಳುತ್ತಿದ್ದಾರೆ. ಆದರೂ ಬಿಡದೆ ಇದನ್ನೇ ಚಟವಾಗಿಸಿಕೊಂಡು ಸಾಲ ಮಾಡಿ ಬೆಟ್ಟಿಂಗ್‌ ಕಟ್ಟುತ್ತಿರುವ ಮಾಹಿತಿಯೂ ಕೇಳಿಬರುತ್ತಿದೆ.

ನಾರಾಯಣ ಹೆಗಡೆ

ಹಾವೇರಿ: ಐಪಿಎಲ್‌ ಕ್ರಿಕೆಟ್‌ ಜ್ವರ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ವ್ಯಾಪಿಸಿದ್ದು, ಸಂಜೆಯಾಗುತ್ತಿದ್ದಂತೆ ಅಂದಿನ ಮ್ಯಾಚ್‌ ಬಗ್ಗೆಯೇ ಚರ್ಚೆ ಶುರುವಾಗುತ್ತಿದೆ. ಅದೇ ರೀತಿ ಸೋಲು- ಗೆಲುವಿನ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್‌ ಹಾ‍ವಳಿಯೂ ಜೋರಾಗಿದ್ದು, ಇದರ ನಿಯಂತ್ರಣ ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಐಪಿಎಲ್‌ ಸೀಸನ್ 18 ಶುರುವಾದ ಮೇಲೆ ಅದರ ಹವಾ ಜಿಲ್ಲೆಯಲ್ಲೂ ಜೋರಾಗಿದೆ. ಅಲ್ಲಿ ಆಟಗಾರರು ಮೈದಾನಕ್ಕೆ ಇಳಿಯುತ್ತಿದ್ದಂತೆ ಇಲ್ಲಿ ಎರಡು ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗುತ್ತದೆ. ಆಟಗಾರರು ಅಲ್ಲಿ ರನ್‌ ಸುರುಮಳೆಗೈಯುತ್ತಿದ್ದರೆ ಇಲ್ಲಿ ಕಿಸೆಯಲ್ಲಿದ್ದ ಹಣವನ್ನೆಲ್ಲ ಬೆಟ್ಟಿಂಗ್‌ ಕಟ್ಟುತ್ತಾರೆ. ತಮ್ಮ ಫೆವರೇಟ್‌ ಆಟಗಾರರು, ಟೀಮ್‌ ಮೇಲೆ ಹಣವನ್ನು ಪಣಕ್ಕಿಡುತ್ತಿದ್ದಾರೆ. ಒಮ್ಮೆ ಹಣ ಗೆದ್ದವರು ಹಲವು ಸಲ ಕಳೆದುಕೊಳ್ಳುತ್ತಿದ್ದಾರೆ. ಆದರೂ ಬಿಡದೆ ಇದನ್ನೇ ಚಟವಾಗಿಸಿಕೊಂಡು ಸಾಲ ಮಾಡಿ ಬೆಟ್ಟಿಂಗ್‌ ಕಟ್ಟುತ್ತಿರುವ ಮಾಹಿತಿಯೂ ಕೇಳಿಬರುತ್ತಿದೆ.

ಕ್ರಿಕೆಟ್‌ನದ್ದೇ ಚರ್ಚೆ: ಆನ್‌ಲೈನ್‌ ಆ್ಯಪ್‌ ಮೂಲಕ ಬೆಟ್ಟಿಂಗ್‌ ನಡೆಸುತ್ತಿರುವುದು ಒಂದು ಕಡೆಯಾದರೆ, ಗ್ರಾಮೀಣ ಭಾಗದ ಯುವಕರು ತಮ್ಮದೇ ಗುಂಪು ಮಾಡಿಕೊಂಡು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಐಪಿಎಲ್‌ ಪಂದ್ಯಾವಳಿ ಶುರುವಾದಾಗಿನಿಂದ ಯುವಕರು ಹಾಗೂ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಉಂಟುಮಾಡಿದೆ. ನಾಲ್ಕು ಯುವಕರು ಒಂದೆಡೆ ಸೇರಿದರೆಂದರೆ ಕ್ರಿಕೆಟ್‌ ಬಗ್ಗೆಯೇ ಚರ್ಚೆ ಶುರುವಾಗುತ್ತದೆ. ನಿತ್ಯ ಸಂಜೆಯಾಗುತ್ತಿದ್ದಂತೆ ಆಯಾ ದಿನದ ಮ್ಯಾಚ್‌ ಲೆಕ್ಕಾಚಾರ ಶುರುವಾಗುತ್ತದೆ. ಎಲ್ಲಿ ಯಾವುದೋ ತಂಡ ಆಟವಾಡುತ್ತಿದ್ದರೆ, ಅದರ ಮೇಲೆ ಹಳ್ಳಿ ಯುವಕರು ಬೆಟ್ಟಿಂಗ್‌ ಕಟ್ಟುತ್ತಾರೆ. ಸಾವಿರಾರು, ಲಕ್ಷಾಂತರ ರು. ಪಣಕ್ಕೊಡ್ಡುತ್ತಿದ್ದಾರೆ. ಕೆಲಸಕ್ಕೆ ಹೋಗುವುದು ಬಿಟ್ಟು ಕ್ರಿಕೆಟ್‌ ಬಗ್ಗೆಯೇ ತಲೆಕೆಡಿಸಿಕೊಂಡ ಯುವಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಹಿರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭವಿಷ್ಯ ಹಾಳು: ದೇಶ ವಿದೇಶಗಳ ಕ್ರಿಕೆಟ್‌ ಆಟಗಾರರನ್ನು ಒಳಗೊಂಡ ಐಪಿಎಲ್‌ ಟೂರ್ನಿಯನ್ನು ಮನರಂಜನೆಗೆ ಸೀಮಿತಗೊಳಿಸಿಕೊಳ್ಳದೇ ಬೆಟ್ಟಿಂಗ್‌ ಗೀಳಿಗೆ ಬಿದ್ದು ಯುವಜನತೆ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೆಟ್ಟಿಂಗ್‌ನಲ್ಲಿ ಗೆದ್ದವರು ಅದೇ ಉಮೇದಿನಲ್ಲಿ ಮತ್ತೆ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಹಣ ಕಳೆದುಕೊಂಡವರು ಮತ್ತೊಂದರಲ್ಲಾದರೂ ಗೆಲ್ಲಬಹುದು ಎಂದುಕೊಂಡು ಹಣ ಕಟ್ಟಿ ಮತ್ತೆ ಸೋಲುತ್ತಿದ್ದಾರೆ. ಹೀಗೆ ಇದು ಚಟವಾಗಿ ಕಿಸೆ ಖಾಲಿ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಯುವಕರಷ್ಟೇ ಅಲ್ಲದೇ ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಕಾಲೇಜು ವಿದ್ಯಾರ್ಥಿಗಳು ಹೀಗೆ ವಿವಿಧ ವಯೋಮಾನದವರು ಬೆಟ್ಟಿಂಗ್‌ ಚಟ ಹತ್ತಿಸಿಕೊಂಡಿದ್ದಾರೆ. ದುಡಿದ ಹಣವನ್ನು ಬೆಟ್ಟಿಂಗ್‌ ಕಟ್ಟಿ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಪೋಷಕರನ್ನು ಪೀಡಿಸಿ, ಕಂಡ ಕಂಡವರಲ್ಲಿ ಸಾಲ ಮಾಡಿ ಬೆಟ್ಟಿಂಗ್‌ ಕಟ್ಟುತ್ತಿರುವವರೂ ಇದ್ದಾರೆ. ಪಂದ್ಯ ನೋಡಿ ಕ್ರೀಡಾ ಮನೋಭಾವನೆ, ಆಟಗಾರರ ಆದರ್ಶ ಕಲಿಯುವುದು ಬಿಟ್ಟು ಯುವಕರು ದಾರಿ ತಪ್ಪುತ್ತಿರುವುದು ಆತಂಕ ಹುಟ್ಟಿಸಿದೆ. ಪೊಲೀಸರ ನಿಗಾ

ಜಿಲ್ಲೆಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ಜೋರಾಗಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಇಸ್ಪೀಟ್‌ ಜೂಜು, ಮಟಕಾ ದಂಧೆ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವ ಪೊಲೀಸರು, ಈಗ ಐಪಿಎಲ್‌ ಬೆಟ್ಟಿಂಗ್‌ ಮೇಲೂ ನಿಗಾ ಇಟ್ಟಿದ್ದಾರೆ. ರಾಣಿಬೆನ್ನೂರು, ಸವಣೂರು, ಹಾನಗಲ್ಲ ತಾಲೂಕಿನ ಆಡೂರು, ಹಾವೇರಿ ನಗರ ಸೇರಿದಂತೆ ಈಗಾಗಲೇ ಬೆಟ್ಟಿಂಗ್‌ ನಿರತರ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಐಪಿಎಲ್‌ ಪಂದ್ಯಾವಳಿ ಇನ್ನೂ ಅರ್ಧವೂ ಮುಗಿದಿಲ್ಲ. ಇನ್ನೂ ಮೂರು ನಾಲ್ಕು ವಾರಗಳ ಕಾಲ ನಡೆಯಲಿದ್ದು, ಪೊಲೀಸರು ಕ್ರಿಕೆಟ್‌ ಬೆಟ್ಟಿಂಗ್‌ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.ಎರಡು ಕೇಸ್‌ ದಾಖಲು

ಜಿಲ್ಲೆಯಲ್ಲಿ ಐಪಿಎಲ್‌ ಬೆಟ್ಟಿಂಗ್‌ ಶುರುವಾದಾಗಿನಿಂದ ಹಲವು ಪ್ರಕರಣಗಳು ದಾಖಲಾಗಿವೆ. ಮಂಗಳವಾರ ರಾತ್ರಿ ನಡೆದ ಪಂಜಾಬ್ ಕಿಂಗ್ಸ್‌ ಇಲೆವೆನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಮ್ಯಾಚ್ ವೇಳೆ ಸವಣೂರು ತಾಲೂಕು ಕಾರಡಗಿ ಕ್ರಾಸ್‌ ಬಳಿ ಪ್ರತಿ 6, 10 ಹಾಗೂ 15 ಒವರ್‌ಗಳ ಆಧಾರದ ಮೇಲೆ ಒಂದು ಸಾವಿರ ರು.ಗೆ ಒಂದು ಸಾವಿರ ರು. ಕೊಡುವುದಾಗಿ ಹೇಳಿ ಬೆಟ್ಟಿಂಗ್‌ ಕಟ್ಟಿಸಿಕೊಳ್ಳುತ್ತಿದ್ದ ಮಹ್ಮದ್‌ಷರೀಫ ಅಬ್ದುಲ್‌ ಮುಲ್ಲಾ ಹಾಗೂ ಸಿರಾಜ್‌ ಅಬ್ದುಲ್‌ಮುನಾಫ್‌ ಎಂಬವರ ಮೇಲೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಹಾನಗಲ್ಲ ತಾಲೂಕಿನ ಆಡೂರು ಠಾಣೆ ವ್ಯಾಪ್ತಿಯ ಕಂಚಿನೆಗಳೂರು ಗ್ರಾಮದ ಬಸ್‌ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಐಪಿಎಲ್‌ ಪಂದ್ಯಕ್ಕೆ ಹಣ ಪಣಕ್ಕೆ ಹಚ್ಚಿ ಗುಂಪಾಗಿ ಜನರನ್ನು ಸೇರಿಸಿಕೊಂಡು ಬೆಟ್ಟಿಂಗ್‌ ಕಟ್ಟುತ್ತಿದ್ದಾಗ ದಾಳಿ ನಡೆಸಿ ಸರ್ದಾರಖಾನ್‌ ಅಬ್ದುಲ್‌ಖಾನ್‌ ಹಾಗೂ ಮಹ್ಮದ್‌ ಹನೀಫ್‌ ಮೌಲಾಸಾಬ್ ಚೆನ್ನಾಪುರ ಎಂಬವರ ಮೇಲೆ ಆಡೂರು ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಕಠಿಣ ಕಾನೂನು ಕ್ರಮ: ಕ್ರಿಕೆಟ್‌ ಬೆಟ್ಟಿಂಗ್‌ ಮೇಲೆ ನಿಗಾ ವಹಿಸಲಾಗಿದೆ. ಈಗಾಗಲೇ ಹಲವು ಕಡೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಕ್ರಿಕೆಟ್‌ ಪಂದ್ಯದ ಮೇಲೆ ಬೆಟ್ಟಿಂಗ್‌ ಕಟ್ಟುವುದು ಅಪರಾಧವಾಗಿದ್ದು, ಯುವಕರು ಎಚ್ಚೆತ್ತುಕೊಳ್ಳಬೇಕು. ಸಿಕ್ಕಿಬಿದ್ದರೆ ಕಠಿಣ ಕಾನೂನು ಕ್ರಮಕ್ಕೆ ಒಳಗಾಗಿ ಭವಿಷ್ಯವೇ ಹಾಳಾಗಬಹುದು ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ