ಕೊಡಗಿನಲ್ಲಿ ಸಿಲುಕಿದ ಇರಾನ್ ದಂಪತಿ

KannadaprabhaNewsNetwork |  
Published : Apr 07, 2026, 03:00 AM IST
ಇರಾನ್‌  | Kannada Prabha

ಸಾರಾಂಶ

ದೀರ್ಘ ರಜೆ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಸಿಲುಕಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿದೀರ್ಘ ರಜೆ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಸಿಲುಕಿಕೊಂಡಿದ್ದಾರೆ.

ವಿಮಾನ ಸೇವೆ ರದ್ದಾದ ಕಾರಣ ಇರಾನ್‌ಗೆ ಮರಳಲಾಗದೆ ಕೊಡಗಿನಲ್ಲೇ ಉಳಿಯುವಂತಾಗಿದೆ. ಮತ್ತೊಂದು ಕಡೆ ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್‌ಗೆ ಹೋಗಲು ಸಾಧ್ಯವಾಗುತ್ತೋ ಎಂಬ ಆತಂಕದಲ್ಲಿದ್ದಾರೆ.ಇರಾನ್‌ ಪ್ರಜೆಯೊಂದಿಗೆ ವಿವಾಹವಾಗಿದ್ದ ಕೊಡಗು ಮೂಲದ ಮಹಿಳೆ ದೀರ್ಘ ರಜೆ ಮೇಲೆ ತವರೂರಾದ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಾಂತೂರಿಗೆ ಬಂದಿದ್ದರು. ಕೊಡಗು ಮೂಲದ ನವೀನ್‌ ಅವರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿತ್ತು. ಬಳಿಕ ಪ್ರೀತಿಸಿ ವಿವಾಹವಾದರು. ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿದ್ದರು.ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಎಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ ಮಾರ್ಚ್‌ನಲ್ಲಿ ಇರಾನ್‌ಗೆ ವಾಪಸಾಗುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದು, ಮಾ.16ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏ. 15ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು. ಆ ವಿಮಾನವೂ ರದ್ದಾಯಿತು.ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಂದಿನ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಯುದ್ಧ ಇನ್ನಷ್ಟು ಮುಂದುವರಿದರೆ, ಕೊಡಗಿನಲ್ಲೇ ಇನ್ನಷ್ಟು ದಿನ ಉಳಿಯಬೇಕಾಗುತ್ತದೆ. ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್‌ನಲ್ಲಿ ಇಂಟರ್ನೆಟ್‌ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದಾಗಿ ತಮ್ಮ ಮಕ್ಕಳನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಯುದ್ಧ ಪರಿಸ್ಥಿತಿಯಿಂದಾಗಿ ಬದುಕು ಅತಂತ್ರವಾದಂತಾಗಿದೆ. ಈ ಯುದ್ದ ಅದಷ್ಟು ಬೇಗ ಮುಗಿಯಲ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಬಳಸಿ
ಕ್ಷೇತ್ರದಲ್ಲಿ ಸಾರಿಗೆ ಸಂಚಾರ ಸುಧಾರಣೆಗೆ ಪ್ರಯತ್ನ