ಮುಂಡಗೋಡ: ತಾಲೂಕಿನ ಕಾತೂರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ತಕ್ಷಣ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಕಾತೂರ ಭಾಗದ ರೈತರು ಸಹಕಾರಿ ಸಂಘದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಅಧ್ಯಕ್ಷರ ಮೇಲೆ ಸಾಕಷ್ಟು ಹಣ ದುರ್ಬಳಕೆ ಆರೋಪವಿರುವುದರಿಂದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡಸಲು ಅವಕಾಶವಿಲ್ಲ. ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ತಕ್ಷಣ ನೈತಿಕ ಹೊಣೆ ಹೊತ್ತು ಹಾಲಿ ಅಧ್ಯಕ್ಷ ಚಂದ್ರಕಾಂತ ಪಾಟೀಲ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ರೈತರ ಹಣ ನುಂಗಿದ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ ಮಾತನಾಡಿ, ಆಡಳಿತಾತ್ಮಕ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ಬಂಗಾರ ಸಾಲ, ರಸಗೊಬ್ಬರ ವಿಭಾಗ ಸೇರಿದಂತೆ ವಿವಿಧ ಹಣಕಾಸು ವ್ಯವಹಾರದ ದಾಖಲೆಗಳ ಕುರಿತು ಪರಿಶೀಲಿಸಬೇಕು. ₹೩೩ ಲಕ್ಷಕ್ಕೂ ಅಧಿಕ ಮೊತ್ತದ ಅವ್ಯಹಾರದ ಬಗ್ಗೆ ದಾಖಲೆ ಬಹಿರಂಗಪಡಿಸಬೇಕು. ತನಿಖೆಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆದ ಬಗ್ಗೆ ಸಾಬೀತಾದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಘದ ಹಣ ಹಾಗೂ ಸರ್ವ ಸದಸ್ಯರ ಹಿತಾಸಕ್ತಿ ರಕ್ಷಿಸುವ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಳಿಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಈ ಬಗ್ಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷರ ಗಮನಕ್ಕೆ ತಂದು ಸಮಗ್ರ ತನಿಖೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.