ಆರೋಗ್ಯ ತಪಾಸಣೇಲಿ ₹799.20 ಕೋಟಿ ಅಕ್ರಮ: ಶಾಸಕ ಆರಗ ಆರೋಪ

KannadaprabhaNewsNetwork |  
Published : Oct 08, 2026, 01:30 AM IST
ಪೋಟೊ: 07ಎಸ್ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸುಮಾರು 799.20 ಕೋಟಿ ರು. ಅಕ್ರಮ ನಡೆದಿದೆ. ಈ ಬಗ್ಗೆ ಸಿಬಿಐ ಅಥವಾ ಇಡಿಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸುಮಾರು 799.20 ಕೋಟಿ ರು. ಅಕ್ರಮ ನಡೆದಿದೆ. ಈ ಬಗ್ಗೆ ಸಿಬಿಐ ಅಥವಾ ಇಡಿಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಪಾತ್ರದ ಬಗ್ಗೆಯೂ ಆರೋಪಗಳು ಕೇಳಿ ಬಂದಿರುವುದರಿಂದ ರಾಜ್ಯದ ತನಿಖಾ ಸಂಸ್ಥೆಗಳಿಂದ ಮಾತ್ರ ತನಿಖೆ ನಡೆಸುವುದು ಸೂಕ್ತವಲ್ಲ. ಅಲ್ಲದೆ, ಹಣದ ವಹಿವಾಟು ಹೊರರಾಜ್ಯಗಳಿಗೂ ನಡೆದಿರುವ ಆರೋಪ ಇರುವುದರಿಂದ ಸಿಬಿಐ ಅಥವಾ ಇಡಿಗೆ ಪ್ರಕರಣ ವಹಿಸಬೇಕು ಎಂದರು.

ಕಳೆದ ಮೂರು ವರ್ಷಗಳಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆಗೆ ಒಬ್ಬರಿಗೆ 2950 ರು.ರಂತೆ ಸುಮಾರು 28 ಲಕ್ಷ ಮಂದಿಯ ತಪಾಸಣೆ ನಡೆಸಲಾಗಿದೆ ಎಂದು ತೋರಿಸಿ 799.20 ಕೋಟಿ ರು.ವೆಚ್ಚ ಮಾಡಲಾಗಿದೆ. ಆದರೆ, ರಾಜ್ಯದಾದ್ಯಂತ ವಾಸ್ತವವಾಗಿ ತಪಾಸಣೆ ನಡೆದಿರುವ ಬಗ್ಗೆ ಸಮರ್ಪಕ ದಾಖಲೆಗಳಿಲ್ಲ ಎಂದು ಆರೋಪಿಸಿದರು.

ತಪಾಸಣೆಗಾಗಿ ಎಂಟು ಗುತ್ತಿಗೆದಾರರಿಗೆ 81 ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ. ಆದರೆ, ಯಾವ ಕಾರ್ಮಿಕರನ್ನು ಎಲ್ಲಿ ಪರೀಕ್ಷಿಸಲಾಯಿತು, ಯಾವ ವೈದ್ಯರು ತಪಾಸಣೆ ನಡೆಸಿದರು, ಯಾವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಿತು, ಬಳಸಿದ ಕಿಟ್‌ಗಳ ಖರೀದಿ ಹಾಗೂ ಪಾವತಿ ವಿವರಗಳಂತಹ ದಾಖಲೆಗಳು ಲಭ್ಯವಿಲ್ಲ ಎಂದು ದೂರಿದರು.

ಒಬ್ಬ ಕಾರ್ಮಿಕ ಹಾಗೂ ಅವಲಂಬಿತರಿಗೆ ಸುಮಾರು 20 ಬಗೆಯ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಎಚ್‌ಐವಿ ಪರೀಕ್ಷಾ ಕಿಟ್‌ಗಳ ಖರೀದಿಯನ್ನೂ ತೋರಿಸಲಾಗಿದೆ. ಸಣ್ಣ ಮಕ್ಕಳಿಗೂ ಎಚ್‌ಐವಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಲ್ ಮಾಡಿರುವುದು ಗಂಭೀರ ವಿಚಾರ ಎಂದು ಹೇಳಿದರು.

ಈ ಯೋಜನೆಯ ಹಣದ ವಹಿವಾಟು ದೆಹಲಿ, ಕೇರಳ ಸೇರಿದಂತೆ ಹೊರರಾಜ್ಯಗಳಿಗೂ ನಡೆದಿರುವ ಅನುಮಾನವಿದೆ. ವೈದ್ಯರು ಸೇರಿದಂತೆ ಕೆಲವರಿಗೆ ನಗದು ರೂಪದಲ್ಲಿ ಹಣ ಪಾವತಿಸಲಾಗಿದೆ ಎಂಬ ಆರೋಪವೂ ಇದೆ. ಕಾರ್ಮಿಕ ಇಲಾಖೆ, ಕಾರ್ಮಿಕ ಮಂಡಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆಯಾಗಬೇಕು. ಸಚಿವರ ಗಮನಕ್ಕೆ ಬಾರದೆ ಮೂರು ವರ್ಷಗಳ ಕಾಲ ಇಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚಾಗಲು ಸಾಧ್ಯವೇ ಎಂಬುದನ್ನೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಇಲಾಖೆಯಲ್ಲಿನ ಇತರ ಯೋಜನೆಗಳಲ್ಲಿಯೂ ಅಕ್ರಮ ನಡೆದಿರುವ ಸಾಧ್ಯತೆಯಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಗ್ಯ ತಪಾಸಣೆ ಯೋಜನೆಯೊಂದರಲ್ಲೇ 799.20 ಕೋಟಿ ರು. ಅಕ್ರಮದ ಆರೋಪವಿದ್ದು, ಸಮಗ್ರ ತನಿಖೆ ನಡೆಸಿದರೆ ಇನ್ನಷ್ಟು ವಿಚಾರಗಳು ಹೊರಬರಲಿವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಆರ್. ಕೆ. ಸಿದ್ರಾಮಣ್ಣ, ಹೆದ್ದೂರು ನವೀನ್ ಇದ್ದರು.

ಶಿವಮೊಗ್ಗದಲ್ಲೇ 30 ಕೋಟಿ ಖರ್ಚು?

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ದಾಖಲೆ ಸೃಷ್ಟಿಸಿ, ಸುಮಾರು 30 ಕೋಟಿ ಖರ್ಚು ಮಾಡಲಾಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಕುಂಸಿಯಲ್ಲಿ 1402, ಟಿಪ್ಪು ನಗರದಲ್ಲಿ 1502, ಹಾರನಹಳ್ಳಿಯಲ್ಲಿ 1602 ಜನ ಸೇರಿದಂತೆ ವಿವಿಧೆಡೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ, ಸ್ಥಳೀಯವಾಗಿ ವಿಚಾರಿಸಿದಾಗ, ಇಂತಹ ಆರೋಗ್ಯ ತಪಾಸಣೆ ನಡೆದಿರುವ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ಇಲ್ಲ ಎಂದು ಹೇಳಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಇಂತಹ ಯಾವುದೇ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆದಿಲ್ಲ ಎಂದು ಹಲವು ಶಾಸಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದಿರುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಂದ್ರ ಮೋದಿ ಆಡಳಿತ ಕುರಿತು ಬೀದಿ ನಾಟಕ
ಕುರುಹಿನಶೆಟ್ಟಿ ಭಜನಾ ಮಂಡಳಿಯಿಂದ ಭಕ್ತಿಗೀತೆ