ನೀರಾವರಿ ಇಲಾಖೆ ಎಂಜಿನಿಯರ್ ಅಚಾತುರ್ಯ: ಕಟಾವು ಮಾಡಿದ್ದ ಭತ್ತದ ಪ್ರದೇಶಕ್ಕೆ ನುಗ್ಗಿದ ಕೆರೆ ನೀರು

KannadaprabhaNewsNetwork |  
Published : Jan 25, 2024, 02:02 AM IST
24ಕೆಎಂಎನ್ ಡಿ15ಬಳ್ಳೇಕೆರೆ ಗ್ರಾಮದ ಕೆರೆ ಬಯಲಿಗೆ ಅಪಾರ ಪ್ರಮಾಣದ ನೀರು ನುಗ್ಗಿ ರೈತರು ಕಟಾವು ಮಾಡಿದ್ದ ಭತ್ತದ ಬೆಳೆ ಮುಳುಗಿರುವುದು. | Kannada Prabha

ಸಾರಾಂಶ

ನೀರಾವರಿ ಇಲಾಖೆ ಎಂಜಿನಿಯರ್ ಅವರ ಅಚಾತುರ್ಯದಿಂದ ಕೆರೆ ನೀರು ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿದ್ದ ಭತ್ತದ ಬೆಳೆ ಪ್ರದೇಶಕ್ಕೆ ನುಗ್ಗಿ ಅಪಾರ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಘಟಿಸಿದೆ. ಸಕಾಲದಲ್ಲಿ ರೈತರು ಮರಳಿನ ಚೀಲ ಹಾಕಿ ತೂಬನ್ನು ಮುಚ್ಚಿದ ಪರಿಣಾಮ ಕೆರೆ ಒಡೆದು ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆನೀರಾವರಿ ಇಲಾಖೆ ಎಂಜಿನಿಯರ್ ಅವರ ಅಚಾತುರ್ಯದಿಂದ ಕೆರೆ ನೀರು ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿದ್ದ ಭತ್ತದ ಬೆಳೆ ಪ್ರದೇಶಕ್ಕೆ ನುಗ್ಗಿ ಅಪಾರ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ಘಟಿಸಿದೆ.

ಭೀಕರ ಬರಗಾಲದ ನಡುವೆಯೂ ಹೇಮಾವತಿಯ ನೀರಿನಿಂದ ತಾಲೂಕಿನ ಬಳ್ಳೇಕೆರೆ ಗ್ರಾಮದ ಕೆರೆಯನ್ನು ತುಂಬಿಸಲಾಗಿತ್ತು. ಕೆರೆ ಬಯಲಿನ ರೈತರು ಸಂವೃದ್ಧವಾಗಿ ಭತ್ತ, ಕಬ್ಬು ಜೊತೆಗೆ ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆ ಬೆಳೆದಿದ್ದರು.

ಕೆರೆ ಕೆಳಗಿನ ಪ್ರದೇಶದ ಕೆಲವು ರೈತರು ಭತ್ತ ಕಟಾವು ಮಾಡಿ ಒಕ್ಕಣೆ ಮಾಡುವುದಕ್ಕಾಗಿ ಹರಿ ಹಾಕಿದ್ದರು. ತುಂಬಿದ ಕೆರೆಯಲ್ಲಿನ ತೂಬು ಸಮಪರ್ಕವಾಗಿ ಕಾರ್ಯ ನಿರ್ವಹಿಸದ ಪರಿಣಾಮ ಕೆರೆ ಬಯಲಿನ ಕೆಳ ಭಾಗದ ರೈತರಿಗೆ ನೀರು ಹೋಗುತ್ತಿರಲಿಲ್ಲ. ಇದರಿಂದಾಗಿ ಕೆರೆ ಬಯಲಿನ ಕೆಳ ಭಾಗದ ರೈತರು ತೂಬು ಸರಿಪಡಿಸಿ ಕೆರೆ ಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುವಂತೆ ಮಾಡಿ ಎಂದು ಕೆಲ ರೈತರು ನೀರಾವರಿ ಇಲಾಖೆಗೆ ಮನವಿ ಮಾಡಿದ್ದರು.

ರೈತರ ಮನವಿಗೆ ಮೇರೆಗೆ ಕೆರೆ ತೂಬು ಸರಿಪಡಿಸಲು ನೀರಾವರಿ ಇಲಾಖೆ ಎಂಜಿನಿಯರೊಬ್ಬರು ಕಾರ್ಯಚರಣೆಗೆ ಇಳಿದರು. ಕೆರೆಯಲ್ಲಿ ಅಪಾರ ಪ್ರಮಣದ ನೀರು ತುಂಬಿರುವುದರಿಂದ ತೂಬಿನ ಬಳಿ ನೀರಿನ ಒತ್ತಡವನ್ನು ಕಡಿಮೆ ಮಾಡಲು ತೂಬಿನ ಸುತ್ತ ಮರಳು ಚೀಲಗಳನ್ನಿಟ್ಟು ತೂಬು ಸರಿಪಡಿಸುವ ಬದಲು ಯಾವುದೇ ಪೂರ್ವ ಸಿದ್ಧತಾ ಕ್ರಮ ಅನುಸರಿಸದೆ ಕೆರೆಯ ತೂಬಿನಲ್ಲಿ ಕಟ್ಟಿಕೊಂಡಿದ್ದ ಕಸಕಡ್ಡಿಗಳು ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ ತೂಬಿನ ಗೇಟ್ ಸರಿಪಡಿಸಲು ಹೋಗಿದ್ದಾರೆ.

ಈ ವೇಳೆ ನೀರಿನ ರಭಸಕ್ಕೆ ತೂಬಿನ ಗೆಟ್ ಹಾನಿಗೊಂಡು ಏಕಾಏಕಿ ಅಪಾರ ಪ್ರಮಾಣದ ನೀರು ಕೆಳ ಭಾಗಕ್ಕೆ ನುಗ್ಗಿದ ಪರಿಣಾಮ ಕೆರೆ ಬಯಲಿನ ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿ ಹಾಕಿದ್ದ ಭತ್ತದ ಬೆಳೆ ಹಾನಿಗೊಂಡು ರೈತರಿಗೆ ಲಕ್ಷಂತರ ರು. ನಷ್ಟ ಸಂಭವಿಸಿದೆ.

ಸಕಾಲದಲ್ಲಿ ರೈತರು ಮರಳಿನ ಚೀಲ ಹಾಕಿ ತೂಬನ್ನು ಮುಚ್ಚಿದ ಪರಿಣಾಮ ಕೆರೆ ಒಡೆದು ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ. ನೀರಾವರಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಳ್ಳೇಕೆರೆ ಗ್ರಾಮದ ರೈತರು ಹಾನಿಗೊಂಡಿರುವ ಭತ್ತದ ಬೆಳೆಗಾರ ರೈತರಿಗೆ ನೀರಾವರಿ ಇಲಾಖೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌