ಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿ ಜಲಕ್ರಾಂತಿ: ಕೊರಟಗೆರೆ ಕ್ಷೇತ್ರ ೧೦೪ ಕೆರೆಗಳಿಗೆ ಎತ್ತಿನಹೊಳೆ ನೀರು

KannadaprabhaNewsNetwork | Published : Apr 20, 2025 1:51 AM

ಸಾರಾಂಶ

೨೩೦೦ ಕೋಟಿ ವೆಚ್ಚದ ಜೆಜೆಎಂ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ತಲಾ ಶೇ.೫೦ರಷ್ಟು ಅನುದಾನ ನೀಡುತ್ತವೆ. ತುಮಕೂರು ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೇ ಅದಕ್ಕೆ ನೇರ ಹೊಣೆ. ಮನೆಮನೆಗೆ ನೀರು ನೀಡೋದು ನಮ್ಮೇಲ್ಲರ ಜವಾಬ್ದಾರಿ, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಬೇಡ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸೂರ್ಯ- ಚಂದ್ರ ಇರುವ ತನಕ ಎತ್ತಿನಹೊಳೆ ಯೋಜನೆಯ ನೀರು ಕೊರಟಗೆರೆ ಕ್ಷೇತ್ರದ ೧೦೪ ಕೆರೆಗಳಿಗೆ ಹರಿಯುತ್ತೆ. ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ರೈತರ ಮನೆಮಗ. ೨ವರ್ಷದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ೭೫೦ ಕೋಟಿಗೂ ಅಧಿಕ ಅನುದಾನ ಬಂದಿದೆ. ಮುಂದಿನ ೩ ವರ್ಷದ ಅವಧಿಯಲ್ಲಿ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯ ಚಿತ್ರಣ ಬದಲಾಗುವಂತೆ ಕೆಲಸ ಮಾಡುವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ೪೫೪ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಅತಿಸೂಕ್ಷ್ಮ ಗೃಹ ಇಲಾಖೆಗೆ ನನ್ನನ್ನು ನೇಮಿಸಿದ್ದಾರೆ. ಹಳ್ಳಿಗಳಿಗೆ ನಾನು ಬರುವುದಕ್ಕೆ ಆಗುತ್ತಿಲ್ಲ, ಅದಕ್ಕಾಗಿ ನಾನು ಜನರಲ್ಲಿ ಕ್ಷಮೆ ಕೇಳುವೆ. ನಾನು ನಿಮ್ಮ ಮನೆಯ ಮಗನಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ಅಭಿವೃದ್ಧಿಗೆ ಅನುದಾನ ತರುವೆ. ಗ್ಯಾರಂಟಿ ಯೋಜನೆಯ ಜೊತೆಯಲ್ಲೇ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಯೂ ಆಗಲಿದೆ ಎಂದು ಭರವಸೆ ನೀಡಿದರು.

ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಸಹ ಬೂಟಾಟಿಕೆ ಮಾಡಿದ ವ್ಯಕ್ತಿ ನಾನಲ್ಲ. ಅಭಿವೃದ್ಧಿಯೇ ನನ್ನನ್ನು ಟೀಕೆ ಮಾಡುವವರಿಗೆ ನಾನು ನೀಡುವ ಉತ್ತರ. ನರೇಗಾ ಯೋಜನೆಯಡಿ ೩೦ ಕೋಟಿ ವೆಚ್ಚದಲ್ಲಿ ೨೦೦ಕ್ಕೂ ಅಧಿಕ ಶಾಲೆಗಳ ಶೌಚಾಲಯ, ಆಟದ ಮೈದಾನ, ಕಾಂಪೌಂಡು ಮತ್ತು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಡೇರಿದ ರೈತರ ಬಹುದಿನಗಳ ಬೇಡಿಕೆ:

ಕೊರಟಗೆರೆ ಕ್ಷೇತ್ರಕ್ಕೆ ನಾನು ೨೦೦೮ರಲ್ಲಿ ಚುನಾವಣೆಗೆ ಬಂದಾಗ ಕೋಡ್ಲಹಳ್ಳಿಯ ರೈತರು ನನ್ನ ಮುಂದೆ ನೀರಾವರಿಯ ಸವಾಲು ಹಾಕಿದ್ದರು. ನೀವು ಭರವಸೆ ನೀಡಬೇಡಿ, ಜಾರಿಗೆ ತನ್ನಿ, ನಿಮ್ಮ ಜೊತೆ ಇರ್ತೀವಿ ಅಂದಿದ್ದರು. ಅದಕ್ಕಾಗಿಯೇ ಎತ್ತಿನಹೊಳೆ ಯೋಜನೆಗೆ ೨೦೧೩ರಲ್ಲಿ ಅಡಿಗಲ್ಲು ಹಾಕಿದೆ. ಈಗ ನಾನು ರೈತರಿಗೆ ನೀಡಿದ ನೀರಾವರಿ ಭರವಸೆ ೨೦೨೬ಕ್ಕೆ ಈಡೇರುತ್ತೆ. ಸೂರ್ಯ- ಚಂದ್ರ ಇರುವ ತನಕ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯುತ್ತದೆ ಎಂದರು.

ಸಣ್ಣ ನೀರಾವರಿ ಸಚಿವ ಬೋಸರಾಜು ಮಾತನಾಡಿ, ಡಾ.ಜಿ.ಪರಮೇಶ್ವರ್ ಬೇಡಿಕೆಯಂತೆ ತುಮಕೂರು ಜಿಲ್ಲೆಯ ೧೦ ತಾಲೂಕಿನ ಅಂತರ್ಜಲ ಅಭಿವೃದ್ಧಿಗೆ ನನ್ನ ಇಲಾಖೆಯಿಂದ ೬೭೦ ಕೋಟಿ ನೀಡಲಾಗಿದೆ. ಈಗಾಗಲೇ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ೫೨೬ ಕೊಳವೆಬಾವಿ ಹಾಕಿಸಿ ಪಂಪು, ಮೋಟಾರ್ ವಿತರಣೆ ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಗೃಹ ಸಚಿವರು ಏನೇ ಕೇಳಿದರೂ ನಮ್ಮ ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾವಗಡ ಶಾಸಕ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಅಶೋಕ್, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ, ಬೆಂಗಳೂರು ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್, ಮುಖ್ಯ ಇಂಜಿನಿಯರ್ ಪ್ರಕಾಶ್ ಶ್ರೀಹರಿ, ಅಧೀಕ್ಷಕ ಇಂಜಿನಿಯರ್ ಸಂಜೀವರಾಜು, ತುಮಕೂರು ಕಾರ್ಯಪಾಲಕ ಇಂಜಿನಿಯರ್ ಮೂಡಲಗಿರಿಯಪ್ಪ, ಸಣ್ಣ ನೀರಾವರಿ ಎಇಇ ತಿಪ್ಪೇಸ್ವಾಮಿ, ಎಇ ರಮೇಶ್, ತಾಪಂ ಇಒ ಅಪೂರ್ವ, ಎಡಿಎ ಗುರುಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥ್ ನಾರಾಯಣ್, ತೀತಾ ಗ್ರಾಪಂ ಅಧ್ಯಕ್ಷೆ ಸುಮಂಗಳ, ಮುಖಂಡರಾದ ಮಹಾಲಿಂಗಪ್ಪ, ಎಂಎನ್‌ಜೆ ಮಂಜುನಾಥ, ಕುಮಾರ್ ಸೇರಿದಂತೆ ಇತರರು ಇದ್ದರು.

೪೫೪ ಕೋಟಿಯ ವಿವಿಧ ಕಾಮಗಾರಿಗಳಿಗೆ ಚಾಲನೆ:

ಸಣ್ಣ ನೀರಾವರಿಯ ೬೨ ಕೆರೆಗಳಿಗೆ ೨೮೮ ಕೋಟಿ, ಪಿಡಬ್ಲ್ಯೂಡಿಯ ೩೪.೯೯ಕೋಟಿಯ ೧೨ ಕಾಮಗಾರಿ, ಜಿಪಂಯ ೨೪.೧೨ ಕೋಟಿಯ ೬೧ ಕಾಮಗಾರಿ, ಗ್ರಾಮೀಣ ಇಲಾಖೆಯ ೩೪.೫೬ ಕೋಟಿಯ ೫೩ ಕಾಮಗಾರಿ, ಬೆಸ್ಕಾಂ ಇಲಾಖೆಯ ೧೯.೧೫ ಕೋಟಿಯ ೨ ಕಾಮಗಾರಿ, ಪಶು ಇಲಾಖೆಯ ೫೦ ಲಕ್ಷದ ೧ ಕಾಮಗಾರಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ೨೪.೫೦ ಲಕ್ಷ ವೆಚ್ಚದ ೨ ಕಾಮಗಾರಿಯ ಜೊತೆ ೬.೬೨ ಕೋಟಿ ವೆಚ್ಚದಲ್ಲಿ ೧೩೦೨ ಪಲಾನುಭವಿಗಳಿಗೆ ಸಲಕರಣೆಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿತರಣೆ ಮಾಡಿದರು.

ಸೇತುವೆ ಕಂ ಬ್ರೀಡ್ಜ್‌ಗೆ ೩೨ಕೋಟಿ:

ಸುವರ್ಣಮುಖಿ ನದಿಗೆ ಅಡ್ಡಲಾಗಿ ಬರಕ- ೧.೯೬ ಕೋಟಿ, ಬುಕ್ಕಾಪಟ್ಟಣ- ೨.೫ ಕೋಟಿ, ಜಗನ್ನಾಥಪುರ- ೨.೫ ಕೋಟಿ, ಹೋಲತಾಳು- ೨.೫ ಕೋಟಿ, ಲಂಕೇನಹಳ್ಳಿ-೪.೫ ಕೋಟಿ, ಶಿರಿಗೋನಹಳ್ಳಿ-೫ ಕೋಟಿ, ಶಕುನಿ ತಿಮ್ಮಹಳ್ಳಿ- ೪.೫ ಕೋಟಿ, ಹೊಳವನಹಳ್ಳಿ- ೮ ಕೋಟಿ, ಗೌರಗಾನಹಳ್ಳಿ- ೪.೫, ನೇಗಲಾಲ- ೨ ಕೋಟಿ ವೆಚ್ಚದ ಸೇತುವೆ ಕಂ ಬ್ರೀಡ್ಜ್ ಕಾಮಗಾರಿಗೆ ಮಂಜೂರಾತಿ ದೊರತಿದೆ.

‘೨೩೦೦ ಕೋಟಿ ವೆಚ್ಚದ ಜೆಜೆಎಂ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ತಲಾ ಶೇ.೫೦ರಷ್ಟು ಅನುದಾನ ನೀಡುತ್ತವೆ. ತುಮಕೂರು ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೇ ಅದಕ್ಕೆ ನೇರ ಹೊಣೆ. ಮನೆಮನೆಗೆ ನೀರು ನೀಡೋದು ನಮ್ಮೇಲ್ಲರ ಜವಾಬ್ದಾರಿ, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಬೇಡ.’

ಡಾ.ಜಿ.ಪರಮೇಶ್ವರ. ಗೃಹಸಚಿವ. ಕರ್ನಾಟಕ

--------

‘ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರ ಅಭಿವೃದ್ಧಿಯ ದೂರದೃಷ್ಟಿ ಇರುವ ಜನಸೇವಕ ಡಾ.ಜಿ.ಪರಮೇಶ್ವರ. ಸಿಎಂ ಸಿದ್ದರಾಮಯ್ಯ ಜೊತೆ ಹತ್ತಿರದ ವಿಶ್ವಾಸವುಳ್ಳ ನಾಯಕ ಗೃಹಸಚಿವರು. ಸರ್ಕಾರದ ಯಾವುದೇ ಇಲಾಖೆಗೆ ಗೃಹಸಚಿವರು ಒಂದು ಕರೆ ಮಾಡಿದರೆ ಸಾಕು ಜನಸಾಮಾನ್ಯರ ಕೆಲಸ ಕ್ಷಣಾರ್ಧದಲ್ಲಿ ಆಗಲಿದೆ.’

ಬೋಸರಾಜು. ಸಣ್ಣನೀರಾವರಿ ಸಚಿವ. ಕರ್ನಾಟಕ

Share this article