ಎಸ್.ಜಿ. ತೆಗ್ಗಿನಮನಿನರಗುಂದ: ತಾಲೂಕಿನಲ್ಲಿ ರೈತರು ಹೆಸರು ಕಾಳನ್ನು ಬೆಂಬಲ ಬೆಲೆಯಡಿ ಮಾರಾಟ ಮಾಡಲು ಸರ್ಕಾರದ ನಿಯಮ ಅಡ್ಡಿಯಾಗಿವೆ.ಸರ್ಕಾರ ನಿಗದಿಪಡಿಸಿರುವ ಎಫ್ಎಕ್ಯು ಪ್ರಕಾರ ಹೆಸರು ಕಾಳುಗಳಲ್ಲಿ ಶೇ. 4ರಷ್ಟು ಡ್ಯಾಮೇಜ್ ಕಾಳು ಮಾತ್ರ ಇರಬೇಕೆಂದು ನಿಯಮವಿದೆ. ಆದರೆ ಈ ವರ್ಷ ಪ್ರತಿ ರೈತರ ಹೆಸರು ಕಾಳುಗಳು ಶೇ. 4ಕ್ಕಿಂತ ಹೆಚ್ಚು ಡ್ಯಾಮೇಜ್ ಆಗಿವೆ. ಇದರಿಂದ ಅನ್ನದಾತರಿಗೆ ದಿಕ್ಕು ದೋಚದಾಗಿದೆ.ಹೆಸರು ಕಾಳು ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಹೀಗಾಗಿ ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆ ಕ್ವಿಂಟಲ್‌ಗೆ ₹8768ರಂತೆ ಖರೀದಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ನೋಂದಣಿ ಪ್ರಾರಂಭ: ಸರ್ಕಾರ ಸೆ. 25ರಿಂದ ಬೆಂಬಲ ಬೆಲೆಯಲ್ಲಿ ರೈತರು ಬೆಳೆದ ಹೆಸರನ್ನು ಖರೀದಿಸಲಾಗುವುದೆಂದು ಆದೇಶ ಮಾಡಿದೆ. ಆ ಪ್ರಕಾರ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ತಾಲೂಕು ಶಾಖಾ ಅಧಿಕಾರಿಗಳು ನರಗುಂದ, ಜಗಪುರ, ಚಿಕ್ಕನರಗುಂದ, ಸುರಕೋಡ, ಶಿರೋಳ ಸೇರಿದಂತೆ ಮುಂತಾದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಹೆಸರು ಬೆಳೆದ ರೈತರು ಹೆಸರು ನೋಂದಣಿ ಪ್ರಾರಂಭ ಮಾಡಿದ್ದಾರೆ. ಆದರೆ ಹೆಸರು ಖರೀದಿಯನ್ನು ಇನ್ನೂ ಪ್ರಾರಂಭಿಸಿಲ್ಲ.ಸರ್ಕಾರದ ಆದೇಶದ ಪ್ರಕಾರ ನಾವು ಈಗಾಗಲೇ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಹೆಸರು ಖರೀದಿ ಮಾಡಲು ನೋಂದಣಿ ಪ್ರಾರಂಭ ಮಾಡಿದ್ದೇವೆ. ಶೀಘ್ರದಲ್ಲೇ ಹೆಸರು ಖರೀದಿ ಮಾಡುತ್ತೇವೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ತಾಲೂಕು ಶಾಖಾ ವ್ಯವಸ್ಥಾಪಕ ಸಚಿನ್ ಪಾಟೀಲ ತಿಳಿಸಿದರು.ತಾಲೂಕಿನ ರೈತರು ಅತಿವೃಷ್ಟಿಯಿಂದ ತೊಂದರೆಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಹೆಸರು ಖರೀದಿಗೆ ನಿಯಮಗಳನ್ನು ಸಡಿಲಗೊಳಿಸಿ ಎಲ್ಲ ರೈತರ ಹೆಸರನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಆಗ್ರಹಿಸಿದರು. ಬೆಳೆವಿಮೆ ಪರಿಹಾರ ನೀಡದೆ ಅನ್ಯಾಯ: ಆರೋಪ
ನರಗುಂದ: ಮಳೆಯಿಂದ ಮುಂಗಾರು ಹಂಗಾಮಿನ ಬೆಳೆಹಾನಿಗೀಡಾದ ರೈತರಿಗೆ ಸರ್ಕಾರ ಬೆಳೆವಿಮೆ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಪರೀತಿ ಮಳೆ ಸುರಿದು ತೇವಾಂಶ ಹೆಚ್ಚಾಗಿ ಬೆಳೆಹಾನಿಯಾಗಿವೆ. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳಿಗೂ ರೈತರು ಬೆಳೆವಿಮೆ ಕಂತು ತುಂಬಿದ್ದಾರೆ. ಆದರೂ ಬೆಳೆವಿಮೆ ಪರಿಹಾರ ಇದೂವರೆಗೂ ನೀಡಿಲ್ಲ. ಸರ್ಕಾರ ಮತ್ತು ಬೆಳೆವಿಮೆ ಕಂಪನಿಯವರು 1 ವಾರದಲ್ಲಿ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತವೆಂದು ಎಚ್ಚರಿಸಿದ್ದಾರೆ.