ಹುಬ್ಬಳ್ಳಿ: ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ. ಆದರೆ, ಅವಕಾಶ ಸಿಗಬೇಕಲ್ವೇ? 135 ಜನ ಶಾಸಕರು ಗೆದ್ದಿದ್ದೇವೆ. ಎಲ್ಲರನ್ನು ಮಂತ್ರಿ ಮಾಡುವುದಕ್ಕೆ ಆಗುತ್ತದೆಯೇ? ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ, ಶಾಸಕ ಭರಮಗೌಡ (ರಾಜು) ಅಲಗೌಡ ಕಾಗೆ ಹೇಳಿದರು.
ಎಲ್ಲರಿಗೂ ಆಸೆ ಇರುತ್ತದೆ. ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಆದರೆ, ಅವಕಾಶ ಸಿಗಬೇಕಲ್ವೇ? ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಎಲ್ಲರನ್ನು ಮಂತ್ರಿ ಮಾಡುವುದಕ್ಕೆ, ಮುಖ್ಯಮಂತ್ರಿ ಮಾಡುವುದಕ್ಕೆ ಆಗುವುದಿಲ್ಲ. ಹಿರಿತನದ ಆಧಾರದ ಮೇಲೆ ನನಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದಕ್ಕೆ ಸಮಾಧಾನ ಪಟ್ಟುಕೊಳ್ಳಬೇಕು. ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಬೇರೆ ನಿಗಮ ಕೊಡಿ ಎಂದು ಕೇಳುವುದು ತಪ್ಪು. ಎಲ್ಲದಕ್ಕೂ ಅಸಮಾಧಾನ ತೋರಬಾರದು ಎಂದು ಹೇಳುವ ಮೂಲಕ ನಿಗಮದ ಅಧ್ಯಕ್ಷಗಿರಿ ಸಿಕ್ಕಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲವೆಂದು ತಿಳಿಸಿದರು.
ಸರ್ಕಾರ ಪತನ ಕನಸು:ಬಿಜೆಪಿಯವರು ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡುವ ಹಗಲು ಕನಸು ಕಾಣುತ್ತಿದ್ದಾರೆ. ಅದೆಲ್ಲ ಆಗದ ಮಾತು. ನಾವು 135 ಜನ ಶಾಸಕರಿದ್ದೇವೆ ಎಂದರು.
ಎಲ್ಲದಕ್ಕೂ ವಿರೋಧ ಮಾಡುವುದೇ ಪ್ರತಿಪಕ್ಷದ ಕೆಲಸ. ಅದನ್ನು ಅವರು ಮಾಡುತ್ತಿದ್ದಾರೆ. ಅವರೇನು ನಮ್ಮನ್ನು ಆರತಿ ಮಾಡಿ ಒಳಗೆ ಕರೆದುಕೊಳ್ಳುತ್ತಾರಾ? ವಿರೋಧ ಮಾಡುವುದಕ್ಕಾಗಿಯೇ ವಿರೋಧ ಪಕ್ಷವಿರುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.