ಮಯೂರ್ ಹೆಗಡೆ
ಜೆ.ಪಿ.ನಗರ 4ನೇ ಹಂತ-ಕೆಂಪಾಪುರ, ಹೊಸಹಳ್ಳಿ-ಕಡಬಗೆರೆ ಸಂಪರ್ಕಿಸಲಿರುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ (ಕಿತ್ತಳೆ ಮಾರ್ಗ) ಡೆಡ್‌ಲೈನ್ ಮುಂದೂಡಿಕೆಯಾಗಿದೆ. ಪರಿಣಾಮವಾಗಿ ಯೋಜನಾ ವೆಚ್ಚ ಶೇ.5ರಷ್ಟು ಹೆಚ್ಚುವ ಸಾಧ್ಯತೆಯಿದೆ.
ಇದೇ ಆಗಸ್ಟ್ 10ರಂದು ಪ್ರಧಾನಿ ಮೋದಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಮೂಲಗಳ ಪ್ರಕಾರ ಕಿತ್ತಳೆ ಮಾರ್ಗದ ಕಾಮಗಾರಿ ಐದೂವರೆ ವರ್ಷ ತೆಗೆದುಕೊಳ್ಳಲಿದ್ದು, ಮುಕ್ತಾಯದ ಅವಧಿ 2031ರ ಮೇ ತನಕ ವಿಸ್ತರಣೆಯಾಗಿದೆ. ಕಾಮಗಾರಿಯ ಟೆಂಡರ್ ಈ ವರ್ಷ ನವೆಂಬರ್ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದ್ದು, ಡಿಸೆಂಬರ್ - ಜನವರಿ ಹೊತ್ತಿಗೆ ಕಾಮಗಾರಿ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.ಈ ಮೊದಲು 2029 ಅಥವಾ 2030ರ ಮಧ್ಯಂತರದಲ್ಲಿ 3ನೇ ಹಂತದ ಯೋಜನೆಯನ್ನು ಮುಗಿಸಲು ನಿರ್ಧರಿಸಲಾಗಿತ್ತು. ಆದರೆ, ಟ್ರಾಫಿಕ್ ನಿವಾರಣೆ ದೃಷ್ಟಿಯಿಂದ ಎರಡೂ ಕಾರಿಡಾರ್‌ನಲ್ಲಿ ಹೆಚ್ಚುವರಿಯಾಗಿ ಡಬಲ್ ಡೆಕ್ಕರ್ ನಿರ್ಮಿಸಲು ಉದ್ದೇಶಿಸಲಾಯಿತು. ಇದರಿಂದ ಯೋಜನಾ ಕಾಮಗಾರಿ ಅವಧಿ ಹೆಚ್ಚಾಗಿದೆ. ಕಾಮಗಾರಿ ನಡೆವ ಅವಧಿಯಲ್ಲಿ ಡೆಡ್‌ಲೈನ್ ಇನ್ನಷ್ಟು ಮುಂದೂಡಿಕೆ ಆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಬಿಎಂಆರ್‌ಸಿಎಲ್‌ಗೆ ಸದ್ಯ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳನ್ನು ಪೂರ್ಣಗೊಳಿಸಿದ ಅನುಭವ ಇದೆ. ಜತೆಗೆ ನೀಲಿ ಮಾರ್ಗದ ಕಾಮಗಾರಿ ನಡೆಸಲಾಗುತ್ತಿದೆ. ಇದು ಮುಂದಿನ ಹೊಸ ಯೋಜನೆ ಕೈಗೆತ್ತಿಕೊಳ್ಳಲು ಹಾಗೂ ಆದಷ್ಟು ವಿಳಂಬ ಆಗದಂತೆ ಕಾಮಗಾರಿ ನಡೆಸಲು ನೆರವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಡಬಲ್ ಡೆಕ್ಕರ್‌ನಲ್ಲಿ ಎಲ್ಲಿಯೂ ಟ್ರಾಫಿಕ್ ಸಿಗ್ನಲ್ ಬರುವುದಿಲ್ಲ. ಮೇಲ್ಸೇತುವೆಯಲ್ಲಿ ವಾಹನಗಳು ಸರಾಗವಾಗಿ ಹೋಗುತ್ತವೆ. ಇದರಿಂದ ಹೆಬ್ಬಾಳ, ಕಾಮಾಕ್ಯ ಜಂಕ್ಷನ್, ಜೆ.ಪಿ.ನಗರ ಸೇರಿ ಇತರೆಡೆ ಕೆಳರಸ್ತೆಯಲ್ಲಿ ವಾಹನದಟ್ಟಣೆಯ ಒತ್ತಡ ತಗ್ಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.
ಯೋಜನೆಯ ಕಾಮಗಾರಿಗೆ 8 ಹಂತದಲ್ಲಿ ಟೆಂಡರ್ ಕರೆಯಲಾಗುವುದು, ನಿಲ್ದಾಣ, ವಯಡಕ್ಟ್, ಡಿಪೋಗಳು ನಾಲ್ಕು ಪ್ಯಾಕೇಜ್‌ನಲ್ಲಿ ಸೇರಿಲಿದ್ದು, ಸರ್ಕಾರದ ಅನುದಾನದಲ್ಲಿ ನಿರ್ಮಾಣ ಆಗಲಿದೆ. ನವೆಂಬರ್ ಹೊತ್ತಿಗೆ ಜಪಾನ್ ಇಂಟರ್‌ನ್ಯಾಷನಲ್ ಕೊಆಪರೇಷನ್ ಏಜೆನ್ಸಿ (ಜೈಕಾ) ನೆರವಿನ ₹ 6,770 ಸಾಲದ ಒಪ್ಪಂದ ಏರ್ಪಡಲಿದ್ದು, ಅದರಲ್ಲಿ ರೈಲ್ವೆಬೋಗಿ ವೆಚ್ಚ ಸೇರಿ ಉಳಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.