ಬರದಲ್ಲಿ ಜಾನುವಾರು ಸಾಕಾಣಿಕೆಯೇ ರೈತರಿಗೆ ಸವಾಲು?

KannadaprabhaNewsNetwork |  
Published : Oct 11, 2026, 03:30 AM IST
ಹೂವಿನಹಡಗಲಿಯ ಪಶು ಇಲಾಖೆಯಿಂದ ಬರ ಹಿನ್ನೆಲೆಯಲ್ಲಿ ರೈತರಿಗೆ ಉಚಿತವಾಗಿ ಮೇವಿನ ಬೀಜದ ಕಿಟ್‌ ವಿತರಣೆ ಮಾಡಿದ ಪಶು ವೈದ್ಯಾಧಿಕಾರಿ ನಾರಾಯಣ ಬಣಕಾರ. | Kannada Prabha

ಸಾರಾಂಶ

ತಾಲೂಕಿನಲ್ಲಿ ಬರ ಇರುವುದರಿಂದ ರೈತರು ಮೆಕ್ಕೆಜೋಳದ ಮೇವುನ್ನು ಟ್ಯಾಕ್ಟರ್‌ನ ರೊಟಾವೇಟರ್‌ ಹೊಡೆದು ಹಾನಿ ಮಾಡಬಾರದು, ಜತೆಗೆ ಬೆಂಕಿ ಹಾಕಿ ಸುಡಬಾರದು ಎಂದು ಪಶು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇವು ಸೇವ್‌ ಎಂಬ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಇಲ್ಲದೇ ಬರದಿಂದ ಮೇವು ನೀರು ಕೊರತೆಯ ಮಧ್ಯೆ, ಜಾನುವಾರು ಮತ್ತು ಕುರಿ ಮೇಕೆಗಳ ಸಾಕಾಣಿಕೆದಾರರಿಗೆ ದೊಡ್ಡ ಸವಾಲು ಎದುರಾಗಿದೆ.

ಈ ಬಾರಿಯ ಮುಂಗಾರಿನಲ್ಲಿ 50 ಸಾವಿರ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಹೈಬ್ರೀಡ್‌ ಜೋಳ, ರಾಗಿ, ತೊಗರಿ ಹಾಗೂ ಭತ್ತ ಇತರ ಬೆಳೆಗಳ ಬಿತ್ತನೆಯಾಗಿತ್ತು. ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಭತ್ತ ಮತ್ತು ರಾಗಿ ಹುಲ್ಲು ಹೊರತು ಪಡಿಸಿ, ಮೆಕ್ಕೆಜೋಳ, ಹೈಬ್ರೀಡ್‌ ಜೋಳದ ಮೇವು ಅಷ್ಟಾಗಿ ಹುಲುಸಾಗಿ ಬೆಳೆದಿಲ್ಲ, ಕೃಷಿ ಜತೆಗೆ ಉಪ ಕಸಬುದಾರರು, ಸಾಕಾಣಿಕೆದಾರರಿಗೆ ಮೇವಿನ ಕೊರತೆ ಕಾಡಲಿದೆ ಎನ್ನುತ್ತಾರೆ ರೈತರು.

ತಾಲೂಕಿನಲ್ಲಿ 41,743 ದನ-ಕರುಗಳು, ಎತ್ತು, ಎಮ್ಮೆಗಳಿವೆ, 64,576 ಕುರಿಗಳಿವೆ, 33,363 ಮೇಕೆಗಳಿವೆ, ಇವುಗಳಿಗೆ ಈ ಬರ ಪರಿಸ್ಥಿತಿಯಲ್ಲಿ 37 ವಾರ (9 ತಿಂಗಳು) ಆಗುವಷ್ಟು ಮೇವು ಸಂಗ್ರಹವಿದೆ ಎಂಬುದು ಪಶು ಇಲಾಖೆ ಲೆಕ್ಕಾಚಾರ.

ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯಿತಿಯಿಂದ ಜಾನುವಾರು, ಕುರಿ, ಮೇಕೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. 140 ನೀರಿನ ತೊಟ್ಟಿಗಳಿದ್ದು, 106 ಸುಸಜ್ಜಿತವಾಗಿದೆ. 37 ನೀರಿನ ತೊಟ್ಟಿ ಕೆಟ್ಟಿದೆ. ಆದರೆ ನೀರಿಲ್ಲದೇ ಬಹುತೇಕ ತೊಟ್ಟಿಗಳು ಖಾಲಿ ಇವೆ. ಮಳೆ ಇಲ್ಲದೇ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ಪರಿಣಾಮ, ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನು ಹೆಚ್ಚಾಗುವ ಸಂಭವವಿದೆ.

ಸರ್ಕಾರ ಬರದಲ್ಲಿ ಮೇವಿನ ಬರ ನೀಗಿಸಲು ಪಶು ಇಲಾಖೆಯಿಂದ ರೈತರಿಗೆ ಉಚಿತವಾಗಿ ಮೇವಿನ ಬೀಜಗಳ ಕಿಟ್‌ ವಿತರಿಸಲಾಗುತ್ತಿದೆ. 2 ಸಾವಿರ ಕಿಟ್‌ಗಳ ಬೇಡಿಕೆ ಇದ್ದು, ಇದರಲ್ಲಿ 5 ಕೆಜಿ ತೂಕದ 567 ಕಿಟ್‌ ಪೂರೈಕೆಯಾಗಿದೆ. ಮೇವಿನ ಕಿಟ್‌ಗಾಗಿ ಪಹಣಿ, ಆಧಾರ್‌ ಕಾರ್ಡ್‌, ಎಫ್‌ಐಡಿ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತವಾಗಿ ಮೇವಿನ ಕಿಟ್‌ ನೀಡಲಾಗುತ್ತಿದೆ.

ತಾಲೂಕಿನಲ್ಲಿ ಬರ ಇರುವುದರಿಂದ ರೈತರು ಮೆಕ್ಕೆಜೋಳದ ಮೇವುನ್ನು ಟ್ಯಾಕ್ಟರ್‌ನ ರೊಟಾವೇಟರ್‌ ಹೊಡೆದು ಹಾನಿ ಮಾಡಬಾರದು, ಜತೆಗೆ ಬೆಂಕಿ ಹಾಕಿ ಸುಡಬಾರದು ಎಂದು ಪಶು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇವು ಸೇವ್‌ ಎಂಬ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ತುಂಗಭದ್ರಾ ನದಿ ತೀರ ಪ್ರದೇಶದಲ್ಲಿ ಬಹುತೇಕ ರೈತರು ಭತ್ತದ ನಾಟಿ ಮಾಡಿದ್ದಾರೆ, ಈ ಭಾಗದಲ್ಲಿ ಮೇವಿನ ಲಭ್ಯತೆ ಇರುವ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಕಾಡುತ್ತಿಲ್ಲ, ಆದರಿಂದ ವಲಸೆ ಕುರಿಗಾರರು ಲಗ್ಗೆ ಇಟ್ಟಿದ್ದಾರೆ.

ಮೇವು ಬ್ಯಾಂಕ್: ತಾಲೂಕಿನ ಇಟ್ಟಿಗಿ ಹೋಬಳಿಯಲ್ಲಿ ಮೇವಿನ ಬ್ಯಾಂಕ್‌ ತೆರೆಯುವ ಚಿಂತನೆ ಇದೆ. ಸದ್ಯ 37 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಜಾನುವಾರು ಸಾಕಾಣಿಕೆದಾರರಿಗೆ ಸರ್ಕಾರದಿಂದ ಉಚಿತವಾಗಿ ಮೇವಿನ ಕಿಟ್‌ ವಿತರಿಸಲಾಗುತ್ತಿದೆ. ಬರ ಇರುವ ಕಾರಣ ರೈತರು ಮೇವಿಗೆ ಬೆಂಕಿ ಹಾಕಿ ಹಾನಿ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಪಶು ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ನಾರಾಯಣ ಬಣಕಾರ ತಿಳಿಸಿದರು.

ದೊಡ್ಡ ಸವಾಲು: ಮಳೆ ಇಲ್ಲದೇ ಹಳ್ಳ, ಗೋಕಟ್ಟೆಯಲ್ಲಿ ನೀರಿಲ್ಲ, ರೈತ ಹೊಲ-ಗದ್ದೆಗಳಲ್ಲಿ ಸಾಕಷ್ಟು ಪ್ರಮಾಣ ಮೇವಿಲ್ಲ. ಇದರಿಂದ ಜಾನುವಾರು ಸಾಕಾಣಿಕೆ ದೊಡ್ಡ ಸವಾಲಾಗಿದೆ. ಈ ಬಾರಿಯ ಬರ ಹೇಗೆ ಎದುರಿಸಬೇಕೆಂಬ ಭಯ ಕಾಡುತ್ತಿದೆ ಎಂದು ಗ್ರಾಮಸ್ಥ ಬಸವರಾಜ ಹೊಳಗುಂದಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲೂ ದೋಸ್ತಿ ಮುಂದುವರಿಯಲಿ!
ಸಂಕಷ್ಟಕ್ಕೆ ಅಂಜದೇ ಆತ್ಮವಿಶ್ವಾಸದಿಂದ ಬದುಕು ಸಾಗಿಸಿ: ಮುರುಳೀಧರ ಹೆಗಡೆ