ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯ ಹೊರ ಗುತ್ತಿಗೆ ನೌಕರ ಹೇಮಂತ್ ಎಂಬುವರು ಗರಗನಹಳ್ಳಿ ಗೇಟ್ ಬಳಿ ಟಿಪ್ಪರ್ ತಡೆದು ಪರ್ಮಿಟ್ ತಪಾಸಣೆ ನಡೆಸಿದ್ದಾರೆ. ಹಿರೀಕಾಟಿ ಚೆಕ್ ಪೋಸ್ಟ್ ನಲ್ಲಿ ಕುಳಿತು ಮೈಸೂರು ಕಡೆಗೆ ತೆರಳುವ ಕ್ವಾರಿಯಿಂದ ಬರುವ ಕಲ್ಲು ಹಾಗೂ ಕ್ರಸರ್ ಉತ್ಪನ್ನಗಳ ತಪಾಸಣೆ ನಡೆಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವುದು ಸರಿ ಆದರೆ ಕಚೇರಿಯ ಹೊರ ಗುತ್ತಿಗೆ ನೌಕರ ತಪಾಸಣೆ ನಡೆಸೋದು ಎಷ್ಟು ಸರಿ ಎಂದು ಕ್ವಾರಿ ಲೀಸ್ ದಾರರು ಪ್ರಶ್ನಿಸಿದ್ದಾರೆ.
ಹಿರೀಕಾಟಿ ಚೆಕ್ ಪೋಸ್ಟ್ ನೆಪ ಮಾತ್ರಕ್ಕೆ ಇದೆಯಷ್ಟೆ. ವಾರದಲ್ಲಿ ಒಂದು ಅಥವಾ ಎರಡು ದಿನ ಭೂ ವಿಜ್ಞಾನಿಯೊಬ್ಬರು ಬಂದು ಕಾಟಾಚಾರಕ್ಕೆ ತಪಾಸಣೆ ನಡೆಸುವುದು ವಾಡಿಕೆ. ಉಳಿದ ದಿನಗಳಲ್ಲಿ ಚೆಕ್ ಪೋಸ್ಟ್‌ಗೆ ನೇಮಕಗೊಂಡ ಹೋಂ ಗಾರ್ಡ್‌ಗಳೇ ಚೆಕ್ ಪೋಸ್ಟ್ ಮುಂದೆ ನಿಲ್ಲಿಸಿದ ಟಿಪ್ಪರ್ ಗಳ ಸಾಗಾಣಿಕೆ ಪರವಾನಗಿ ಚೆಕ್ ಮಾಡುತ್ತಾರೆ. ನಿಲ್ಲಸದೆ ಹೋದ ಟಿಪ್ಪರ್ ಗಳನ್ನು ನೋಡುತ್ತ ಕುಳಿತುಕೊಳ್ಳುವುದು ದಿನ ನಿತ್ಯ ಕಾಣುವ ದೃಶ್ಯವಾಗಿದೆ.ಕಚೇರಿಯ ಕೆಲಸದ ನೌಕರ ಅದೇಗೆ ಬಂದು ಟಿಪ್ಪರ್ ಗಳ ತಡೆದು ತಪಾಸಣೆ ಮಾಡಲು ಹೇಳಿದ್ದು ಯಾರು? ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲು ಆದೇಶ ಮಾಡಿದ್ದು ಯಾರು? ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾಗಾಣಿಕೆ ಪರವಾನಗಿ ತಪಾಸಣೆಗೆ ಅವಕಾಶ ಜಿಲ್ಲಾಡಳಿತ ನೀಡಿದೆಯಾ ಎಂಬ ನಾನಾ ಪ್ರಶ್ನೆ ಎದ್ದಿದೆ.
ಅಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಹೆಸರಲ್ಲಿ ಹೊರ ಗುತ್ತಿಗೆ ನೌಕರ ತಾಲೂಕಿನಲ್ಲಿ ಆಗಾಗ್ಗೆ ತಪಾಸಣೆ ನಡೆಸುತ್ತಿದ್ದಾರೆಂಬ ಲೀಸ್ ದಾರರ ಆರೋಪಕ್ಕೆ ಜಿಲ್ಲಾಡಳಿತ ಉತ್ತರ ನೀಡಬೇಕಿದೆ.