ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗಬಸವಕೇಂದ್ರ ಮುರುಘಾ ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ 323 ಅಡಿ ಎತ್ತರದ ಬಸವ ಪುತ್ಥಳಿ ಅನುದಾನ ಅಪವ್ಯಯದ ದೂರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಐವರ ತನಿಖಾ ತಂಡ ರಚಿಸಿ ವರದಿ ಕೋರಿರುವುದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅನುದಾನ ಅಪವ್ಯಯದಲ್ಲಿ ಜಿಲ್ಲಾಡಳಿತದ ಪಾತ್ರವಿದೆಯೇ ? ಪುತ್ಥಳಿಗೆ ಅನುದಾನ ಕೊಟ್ಟು ಕೈ ಕಟ್ಟಿ ಕುಳಿತ ಪರಿಣಾಮ ಸಂಕಷ್ಟ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಯಿತೇ ? ಜಿಲ್ಲಾಡಳಿತದಿಂದಲೇ ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿದೆಯಾ ಎಂಬ ಶಂಕೆಗಳು ವ್ಯಕ್ತವಾಗಿವೆ.
ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 35 ಕೋಟಿ ರುಪಾಯಿಯಷ್ಟು ಬೃಹತ್ ಮೊತ್ತದ ಅನುದಾನ ಜಿಲ್ಲಾಡಳಿತದ ಮೂಲಕವೇ ಮುರುಘಾ ಮಠವ ತಲುಪಿದೆ. ಅನುದಾನ ಬಿಡುಗಡೆ ಮಾಡಿದಾಗ ಕೆಲ ಷರತ್ತುಗಳ ವಿಧಿಸಿ ಪಾಲನೆ ಮಾಡುವಂತೆ ಬಿಗಿ ನಿರ್ದೇಶನ ನೀಡಿತ್ತು. ಈ ವಿಚಾರದಲ್ಲಿ ಜಿಲ್ಲಾಡಳಿತ ಉದಾಸೀನ ತೋರಿದಂತಿದೆ. ಪಾಲನೆ ಮಾಡಿದ್ದರೆ ಜಿಲ್ಲಾಡಳಿತ ತನಿಖೆಗೆ ತಂಡ ನೇಮಿಸಿ ವರದಿ ಕೋರುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆನ್ನಲಾಗಿದೆ.ಅನುದಾನವನ್ನುಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು. ಕಾಮಗಾರಿಯ ಅನುಷ್ಠಾನಕ್ಕೆ ಬೇರೆ ಸರ್ಕಾರಿ ಇಲಾಖೆ ಅಥವ ಖಾಸಗಿ ದೇಣಿಗೆಯಿಂದ ಪಡೆದ ಅನುದಾನದಿಂದ ಪುನರಾವರ್ತೆಯಾಗಿಲ್ಲವೆಂಬುದ ಖಚಿತಪಡಿಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಗಳು ಪ್ರತಿ ಮೂರು ತಿಂಗಳಿಗೊಮ್ಮೆ ಹಣ ಬಳಕೆ ಪ್ರಮಾಣ ಪತ್ರ , ಜಿಪಿಎಸ್ ಛಾಯಾಚಿತ್ರಗಳು, ಭೌತಿಕ ಪ್ರಗತಿ ಮಾಹಿತಿ ಸಮೇತ ಜಿಲ್ಲಾಧಿಕಾರಿಗಳ ದೃಢೀಕರಣದೊಂದಿಗೆ ವಿವರಗಳ ಪಡೆಯಬೇಕೆಂದು ರಾಜ್ಯ ಸರ್ಕಾರ ಸೂಚಿಸಿತ್ತು. ಉಪ ವಿಭಾಗಾಧಿಕಾರಿಗಳಿಗಿಂತ ಕಡಿಮೆ ದರ್ಜೆ ಇಲ್ಲದ ಕನಿಷ್ಟ ಮೂರು ಮಂದಿ ಅಧಿಕಾರಿಗಳ ತಂಡವನ್ನು ರಚಿಸಿ ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ತಪಾಸಣಾ ವರದಿಯನ್ನು ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಬೇಕು. ಇದೆಲ್ಲವನ್ನು ಸಾರ್ವಜನಿಕರ ಮಾಹಿತಿಗಾಗಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಜಿಲ್ಲಾಧಿಕಾರಿಗಳ ಅಧೀಕೃತಿ ಜಾಲ ತಾಣದಲ್ಲಿ ಪ್ರತಿ ಹಂತದಲ್ಲಿಯೂ ಸಹ ಪ್ರಚುರಪಡಿಸಬೇಕು ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿತ್ತು. ಕಾಮಗಾರಿಯ ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿಯನ್ನು ಹಾಗೂ ಉಪ ವಿಭಾಗಾಧಿಕಾರಿಗಳಿಗಿಂತ ಕಡಿಮೆ ದರ್ಜೆ ಇಲ್ಲದ ಮೂರು ಮಂದಿ ಅಧಿಕಾರಿಗಳ ತಂಡದ ತಪಾಸಣಾ ವರದಿಯನ್ನು ಪರಿಶೀಲಿಸಿ ಎಂಪಿಕ್ ಸಭೆಯಲ್ಲಿ ಮಂಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿ ಸರ್ಕಾರ ಷರತ್ತುಗಳ ಮೂಲಕ ಸೂಚಿಸಿತ್ತು. ಅಚ್ಚರಿ ಎಂದರೆ ಪುತ್ಥಳಿ ನಿರ್ಮಾಣ ಕಾಮಗಾರಿಯ ಬಗೆಗಿನ ಮಾಹಿತಿಯ ಜಿಲ್ಲಾಡಳಿತ ತನ್ನ ಅಧೀಕೃತ ವೆಬ್ ಸೈಟ್‌ನಲ್ಲಿ ಪ್ರಚುರ ಪಡಿಸಿ ಸಾರ್ವಜನಿಕರ ಗಮನಕ್ಕೆ ತಂದಿಲ್ಲ. ಅನುದಾನ ಬಳಕೆ ಸಂಗತಿಯ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಪಡಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರು ಪ್ರತಿಮೆ ನಿರ್ಮಾಣದಲ್ಲಿ ಅನುದಾನ ದುರುಪಯೋಗದ ಶಂಕೆ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿ ತನಿಖೆಗೆ ವಿನಂತಿಸಿದ್ದರು. ಜಿಲ್ಲಾಡಳಿತ ಕಾಲ ಕಾಲಕ್ಕೆ ತಪಾಸಣೆ ನಡೆಸಿ ವರದಿಗಳ ಇಟ್ಟುಕೊಂಡಿದ್ದರೆ ಮತ್ತೊಂದು ತನಿಖಾ ತಂಡ ನೇಮಿಸುವ ಅಗತ್ಯ ಎದುರಾಗುತ್ತಿ ರಲಿಲ್ಲ. ಡಿಸೆಂಬರ್ ಒಂದರಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ದದಲ್ಲಿ ಐದು ಮಂದಿ ಅಧಿಕಾರಿಗಳ ತಂಡ ರಚಿಸಿ ಹದಿನೈದು ದಿನಗಳ ಒಳಗಾಗಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೌತಿಕ ಹಾಗೂ ಆರ್ಥಿಕ ವರದಿಯ ಜಿಲ್ಲಾಧಿಕಾರಿ ದಿವ್ಯಪ್ರಸಾದ್ ಕೋರಿದ್ದರು. ಜಿಲ್ಲಾಧಿಕಾರಿಗಳು ನೀಡಿದ ಗಡುವ ಮುಗಿದು ಬರೋಬ್ಬರಿ ಒಂದು ತಿಂಗಳಾಗಿದೆ. ತನಿಖಾ ತಂಡ ಪುತ್ಥಳಿ ನಿರ್ಮಾಣದ ಪ್ರದೇಶಕ್ಕೆ ಭೇಟಿ ನೀಡಿ ಸುಮ್ಮನಾಗಿದೆ. ಮುಂದೆ ಏನಾಯಿತು ಎಂಬ ಬಗ್ಗೆ ಅಷ್ಟಾಗಿ ಮಾಹಿತಿಗಳು ಬಹಿರಂಗಗೊಂಡಿಲ್ಲ.