ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಪುರಸಭೆಯಲ್ಲಿ ಚುನಾಯಿತ ಸರ್ಕಾರವೇ ಅಥವಾ ಅಧಿಕಾರಿಗಳ ಆಡಳಿತವೇ ಎಂಬುದೇ ಗೊತ್ತಾಗದಂತಾಗಿದೆ, ಸದಸ್ಯರ ಗಮನಕ್ಕೆ ಬಾರದೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ಅಭಿವೃದ್ಧಿ ಕುಂಠಿತವಾಗಿದ್ದು, ಮತ ಹಾಕಿದ ಜನ ನಮ್ಮನ್ನು ಬೈಯುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರೇ ಪುರಸಭೆ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಬೀದಿ ದೀಪಗಳಿಲ್ಲದೇ ಪಟ್ಟಣದ ಮುಖ್ಯ ರಸ್ತೆಗಳು ಕತ್ತಲಾವರಿಸಿವೆ. ಪುರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ಭ್ರಷ್ಟಾಚಾರ ನಡೆಸಿದ್ದು. ಈ ಬಗ್ಗೆ ತನಿಖೆ ನಡೆಸಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕಳೆದ ನನ್ನ ಅವಧಿಯಲ್ಲಿ ಕಸವಿಲೇವಾರಿ ಘಟಕದಿಂದ 2 ಲಕ್ಷ ಆದಾಯ ಬರುತ್ತಿತ್ತು ಆದರೆ ಈಗ ಕೇವಲ 40,000 ಆದಾಯ ತೋರಿಸಲಾಗುತ್ತಿದೆ ಯಾಕೆ ಈ ವ್ಯತ್ಯಾಸ ಕಾಣುತ್ತಿದೆ ಎಂದು ಪ್ರಶ್ನಿಸಿದರು.ಸದಸ್ಯ ದಾಳಿಂಬೆ ಗಿರೀಶ್ ಮಾತನಾಡಿ, ಅಮೃತ್ ಯೋಜನೆ ಅಡಿಯಲ್ಲಿ ಪುರಸಭೆಗೆ 60 ಲಕ್ಷ ಅನುದಾನ ಬಂದಿದೆ. ಅದನ್ನು ಹುಳಿಯಾರು ರಸ್ತೆಯ ಹೊಸ ಬಡಾವಣೆಗೆ ಹಾಕಲಾಗಿದೆ. ಜನವಸತಿ ಹೆಚ್ಚಾಗಿರುವ ಬಡಾವಣೆಗಳಲ್ಲಿ ಅಭಿವೃದ್ಧಿ ಆಗಬೇಕಿದ್ದು, ಈ ಹಣವನ್ನು ಜನವಸತಿ ಹೆಚ್ಚಾಗಿರುವ ಬಡಾವಣೆಗಳಲ್ಲಿ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.
ಸದಸ್ಯ ನಾಗರಾಜ್ ಮಾತನಾಡಿ, ಪಟ್ಟಣದಲ್ಲಿ ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳ ಕಾಟ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳ ಮುಂದಾಗಬೇಕು ಎಂದು ಒತ್ತಾಯಿಸಿದರು.ಕಚೇರಿಗೆ ಮರಣ ಪ್ರಮಾಣ ಪತ್ರ ಕೇಳಿಕೊಂಡು ಬರುವ ಸಾರ್ವಜನಿಕರಿಗೆ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಸತಾಯಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗೆ ಪರಿಹಾರ ಹುಡುಕಿ ಎಂದು ಅಧಿಕಾರಿಗಳಿಗೆ ಸದಸ್ಯರು ಸೂಚಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ನಾಗಭೂಷಣ್, ಉಪಾಧ್ಯಕ್ಷೆ ಗೀತಾ ಆಸಂಧಿ ಸೇರಿದಂತೆ ಪುರಸಭಾ ಸದಸ್ಯರುಗಳು ಹಾಜರಿದ್ದರು.